ವಿಜಯಸಾಕ್ಷಿ ಸುದ್ದಿ, ಬೀದರ: ಇತ್ತೀಚೆಗೆ ದೆಹಲಿಯ ಕೆಂಪು ಕೋಟೆಯ ಸಮೀಪ ನಡೆದ ಬ್ಲಾಸ್ಟ್‌ನಂತಹ ವಿಧ್ವಂಸಕ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ಬೀದರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೀವಗಳನ್ನು ಉಳಿಸಬೇಕಾದ ವೈದ್ಯರೇ ಜೀವಿಗಳನ್ನು ವಿಧ್ವಂಸಕ ಕೃತ್ಯಗಳಿಂದ ಹಲವಾರು ಬಲಿ ತೆಗೆದುಕೊಂಡಿರುವುದು ಅಮಾನವೀಯ ಘಟನೆಯಾಗಿದೆ. ಪ್ರಜ್ಞಾವಂತ ಜನರು ಈ ಜೀವ ಸಂಕುಲವನ್ನು ನಾಶ ಮಾಡುವ ಕೃತ್ಯದಲ್ಲಿ ಭಾಗಿಯಾಗಿರುವುದು ನೋವಿನ ಸಂಗತಿ. ಈ ನೀಚ ಕೃತ್ಯವನ್ನು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಖಂಡಿಸಬೇಕಾದ ಅವಶ್ಯಕತೆ ಇದೆ.
ಜನತೆ ಸೌಹಾರ್ದಯುತವಾಗಿ ಬಾಳಬೇಕು. ತಾತ್ವಿಕ ತಳಹದಿಯ ಮೇಲೆ ನಡೆಯಬೇಕೆಂಬ ಬೋಧನೆಯನ್ನು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಈ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದವರನ್ನು ಹುಡುಕಿ ಸದೆಬಡಿಯಬೇಕು. ಇಂತಹ ಕೃತ್ಯಗಳು ಮತ್ತೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದ ಅವರು, ಇಂತಹ ಕೃತ್ಯಗಳನ್ನು ಧರ್ಮ ಪೀಠಗಳು ಸದಾ ಖಂಡಿಸುತ್ತವೆ ಎಂದು ತಿಳಿಸಿದರು.



