ಬಳ್ಳಾರಿ: ಮಾಡೆಲ್ ಹೌಸ್‌ಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದ್ದು, ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಎಸ್‌ಪಿ ಅವರು ಕೆಳಹಂತದ ಅಧಿಕಾರಿಗಳ ಮಾಹಿತಿ ಆಧರಿಸಿ ತರಾತುರಿಯಲ್ಲಿ ಹೇಳಿಕೆ ನೀಡಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಈ ಬಗ್ಗೆ ನಾನು ದೂರು ನೀಡಿದ್ದೇನೆ. ಲೇಔಟ್‌ನ ಇಬ್ಬರು ಸೆಕ್ಯುರಿಟಿಗಳು ಬೆಂಕಿ ಹಚ್ಚಿರುವುದನ್ನು ಕಣ್ಣಾರೆ ನೋಡಿದ್ದಾರೆ. ನಾವು ನೀಡಿದ ವಿಡಿಯೋದಲ್ಲಿರುವ ಹುಡುಗರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು.
ಬಾಗಿಲು ಹಾಗೂ ಕಿಟಕಿಗಳ ಗಾಜು ಒಡೆದು ಒಳಗೆ ಪ್ರವೇಶಿಸಲಾಗಿದೆ. ಇದನ್ನು ‘ರೀಲ್ಸ್’ ಎಂದು ಹೇಳುವುದು ಹಾಸ್ಯಾಸ್ಪದ. ಎಸ್‌ಪಿ ಅವರು ಕೆಳಹಂತದ ಅಧಿಕಾರಿಗಳ ಮಾತುಗಳನ್ನು ನಂಬಬಾರದು. ಬ್ಯಾನರ್ ಗಲಭೆ ಪ್ರಕರಣದಲ್ಲಿ ಸತೀಶ್ ರೆಡ್ಡಿ ಇನ್ನೂ ಬಂಧನಕ್ಕೊಳಗಾಗಿಲ್ಲ.
ಶಾಸಕರ ಸಮ್ಮುಖದಲ್ಲೇ ರಾಜಶೇಖರ್‌ಗೆ ಗುಂಡೇಟು ಬಿದ್ದಿದೆ. ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಬಂಧನವಾಗಿದ್ದರೆ, ನಮ್ಮ ಮನೆಗೆ ಬೆಂಕಿ ಹಚ್ಚುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಎಸ್‌ಪಿ ಮತ್ತು ಡಿವೈಎಸ್‌ಪಿ ಅವರನ್ನು ಸರ್ಕಾರ ಈಗಾಗಲೇ ವರ್ಗಾವಣೆ ಮಾಡಬೇಕಿತ್ತು. 25 ದಿನಗಳಾದರೂ ಗನ್‌ಮ್ಯಾನ್‌ಗಳನ್ನು ಹೊರತುಪಡಿಸಿ ಇನ್ನಾರನ್ನೂ ಬಂಧಿಸಲಾಗಿಲ್ಲ. ಬಳ್ಳಾರಿ ಎಸ್‌ಪಿ ಒಳ್ಳೆಯ ಅಧಿಕಾರಿ, ಆದರೆ ಅವರು ಜನರ ನಂಬಿಕೆ ಕಳೆದುಕೊಳ್ಳಬಾರದು.
ಪೊಲೀಸ್ ವೇಷದಲ್ಲಿರುವ ಕ್ರಿಮಿನಲ್‌ಗಳು ಪೆಟ್ರೋಲ್ ಹಾಗೂ ಡೀಸೆಲ್ ಬಳಸಿ ಬೆಂಕಿ ಹಚ್ಚಿದ್ದಾರೆ. ಸಿಗರೇಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನುವುದು ಸುಳ್ಳು. ಮಂಗಳವಾರ ವಿಧಾನಸಭೆಯಲ್ಲಿ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.
ಕಳೆದ 20 ದಿನಗಳಿಂದ ಸಿಐಡಿ ಏನು ಮಾಡುತ್ತಿದೆ? ಇಷ್ಟೆಲ್ಲಾ ವಿಡಿಯೋ ಸಾಕ್ಷ್ಯಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮಾಡೆಲ್ ಹೌಸ್‌ನಲ್ಲಿ ರೀಲ್ಸ್ ಮಾಡಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅಂಥದ್ದಾದರೆ ರೀಲ್ಸ್ ಮಾಡಿದ ವಿಡಿಯೋವನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.



