ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿರುವ ಅಲೆಮಾರಿ ಸಮುದಾಯಕ್ಕೆ ಸರ್ಕಾರದ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸದೃಢರನ್ನಾಗಿಸುವ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಪ.ಜಾ/ಪ.ಪಂಗಳ ಅಲೆಮಾರಿ, ಅರೆಅಲೆಮಾರಿ ಸಮುಧಾಯಗಳ ಅಭಿವೃದ್ಧಿಗೆ ಸರಕಾರ ನೀಡಿದ ಎಲ್ಲ ಯೋಜನೆಗಳು ಜನರಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಲುಪಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅಧಿಕಾರಿಗಳಿಗೆ ತಿಳಿಸಿದರು.
ಅವರು ಸಮೀಪದ ಬಾಲೇಹೊಸೂರು ಗ್ರಾಮದಲ್ಲಿ ಶನಿವಾರ ಅಲೆಮಾರಿಗಳ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಲೆಮಾರಿ ಹಾಗೂ ಅರೆ ಅಲೆಮಾರಿಗಳಲ್ಲಿ 46 ಜನಾಂಗದವರಿದ್ದು, ಇವರು ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆ ಕೈಗೊಂಡು ಸ್ಥಿರವಾಗಿ ಒಂದು ಕಡೆ ನೆಲೆಸುವಂತೆ ಮಾಡಲು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಗದಗ ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿಗಮ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಪೂರಕವಾಗಿದೆ. ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಮಾಡಿ ಅಲೆಮಾರಿಗಳ ಸ್ಥಿತಿಗತಿ, ಸಮಸ್ಯೆಗಳಲ್ಲಿ ಪರಿಶೀಲಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಗಂಟಿಚೋರ್ಸ್ ಮತ್ತು ಗಿರಣಿಒಡ್ಡರ ಜಾತಿ ಒಂದೇ ಎಂದು ಹೇಳಿದ ಅವರು, ಅಲೆಮಾರಿಗಳಿಗೆ ಸರಕಾರದ ಯೋಜನೆಗಳನ್ನು ಅರ್ಹರಿಗೆ ಸರಿಯಾಗಿ ದೊರೆಯುವಂತೆ ನೀಡಬೇಕು. ಯಾರೂ ಯೋಜನೆಗಳಿಂದ ವಂಚಿತರಾಗಬಾರದು. ಗ್ರಾಮ, ಪಟ್ಟಣ, ನಗರ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಇವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಸರಿಯಾಗಿ ಕಾರ್ಯಗತವಾಗದಿದ್ದಲ್ಲಿ ಅವರನ್ನೇ ಹೊಣೆ ಮಾಡಿ ಮೇಲಾಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅನೇಕರು ಜಾತಿ, ಆದಾಯ ಪ್ರಮಾಣಪತ್ರಗಳು, ನಿವೇಶನಗಳ ಬಗ್ಗೆ ಅಲೆಮಾರಿಗಳ ಸ್ಥಿತಿ-ಗತಿ, ಸಮಸ್ಯೆಗಳನ್ನು ಪರಿಶೀಲಿಸಿ ಹೆಚ್ಚಿನ ಅನುದಾನ ದೊರೆಯುವಂತೆ ಮಾಡಬೇಕು, ರುದ್ರಭೂಮಿ ಒದಗಿಸುವದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು. ಶಿರಹಟ್ಟಿಯ ಪ.ಜಾ ಸುಡಗಾಡಸಿದ್ದರ ಕ್ಷೇಮಾಭಿವೃದ್ಧಿ ಸಂಘದವರು ವಸತಿ ಯೋಜನೆಯಡಿ ನಿವೇಶನ ಹಾಗೂ ಮನೆ ಮಂಜೂರು ಮಾಡುವಂತೆ ಮನವಿ ಅರ್ಪಿಸಿದರು.
ತಹಸೀಲ್ದಾರ ವಾಸುದೇವ ಸ್ವಾಮಿ, ಸಮಾಜಕಲ್ಯಾಣ ಇಲಾಖೆ ತಾಲೂಕಾ ಸಹಾಯಕ ನಿರ್ದೇಶಕ ಗೋವಿಂದಪ್ಪ ಲಮಾಣಿ, ಗ್ರಾಮ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಕಂದಾಯ ನಿರೀಕ್ಷಕ ನದಾಫ್, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಪಿಡಿಓ ಶೇಖರಗೌಡ ವಡಕನಗೌಡ್ರ, ಅಲೆಮಾರಿ ಜಿಲ್ಲಾ ನಾಮನಿದೇಶಿತ ಸದಸ್ಯರುಗಳಾದ ದುರ್ಗೆಶ ವಿಭೂತಿ, ಮೋಹನ ಭಜಂತ್ರಿ, ಅಲೆಮಾರಿ ಜನಾಂಗದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಚ್. ಬೇಲೂರ, ಲೋಕೇಶ ಕಟ್ಟಿಮನಿ, ಬಸವರಾಜ ಹರಕೇರಿ, ಶಿವಕುಮಾರ ಕಡೆಮನಿ ಸೇರಿದಂತೆ ಅನೇಕರಿದ್ದರು.
ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಆದ್ಯತೆ ನೀಡಬೇಕು. ಅಲೆಮಾರಿಗಳು ಮನೆ, ಸ್ವಯಂ ಉದ್ಯೋಗ, ಒಟ್ಟಾರೆಯಾಗಿ ಜೀವನದಲ್ಲಿ ಭದ್ರತೆ ದೊರೆತು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪ್ರತಿ ಹಂತದಲ್ಲಿ ಸರ್ಕಾರ ಸವಲತ್ತುಗಳನ್ನು ಒದಗಿಸುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಲ್ಲವಿ ಜಿ. ತಿಳಿಸಿದರು.



