ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಯಾವುದೇ ವಾರ್ಡ್ಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಇದನ್ನು ಸರಿಪಡಿಸದಿದ್ದರೆ ಧರಣಿ ನಡೆಸುವದಾಗಿ ಪಟ್ಟಣದ 19 ಮತ್ತು 14ನೇ ವಾರ್ಡ್ಗಳ ಸಾರ್ವಜನಿಕರು ಬುಧವಾರ ಏಕಾಏಕಿ ಪುರಸಭೆಗೆ ದೌಡಾಯಿಸಿ ಅಧಿಕಾರಿಗಳಿಗೆ ನೀರು ಪೂರೈಸುವಂತೆ ಆಗ್ರಹಿಸಿದರು.
ನಿತ್ಯದ ಜೀವನಕ್ಕೆ ಅವಶ್ಯವಿರುವಷ್ಟು ಸಹ ನೀರು ಬಿಡುತ್ತಿಲ್ಲ. ಇದರಿಂದಾಗಿ ತೊಂದರೆ ಆಗುತ್ತಿದ್ದು, ಸರಿಯಾದ ಸಮಯಕ್ಕೆ ಸಾಕಾಗುವಷ್ಟು ನೀರು ಬಿಡಬೇಕು. ಪುರಸಭೆ ಸಿಬ್ಬಂದಿ 20–25 ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಿವಾಸಿಗಳು ಆಕ್ರೋಶ ಹೊರ ಹಾಕಿದರು.
ನೀರು ದೊರೆಯದೆ ಇರುವದರಿಂದ ನಾವು ಬೇರೆ ಓಣಿಗೆ ಹೋಗಿ ನೀರು ತರಬೇಕಾಗಿದೆ ಎಂದು ನೀಲಮ್ಮ ಪಾಟೀಲ, ಈರಮ್ಮ ಜಗಲಿ, ರೇಣುಕಾ ಪಾಟೀಲ ಅಳಲು ತೋಡಿಕೊಂಡರು. ಸರಿಯಾಗಿ ನೀರು ಬಿಡದಿದ್ದರೆ ಖಾಲಿ ಕೊಡ ತಂದು ಪುರಸಭೆಗೆ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಪ್ರವೀಣ ಸಾಲಿ, ಹನಮಂತಪ್ಪ, ಚನ್ನಪ್ಪ ಬಳಗನೂರ, ರುದ್ರಗೌಡ ಪಾಟೀಲ ಎಚ್ಚರಿಸಿದರು.
ನೀರು ಪೂರೈಕೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪರಶುರಾಮ ಮುಳಗುಂದ ನಿವಾಸಿಗಳನ್ನು ಸಮಾಧಾನಪಡಿಸಿ ನೀರು ಬಿಡುವಂತೆ ಸಿಬ್ಬಂದಿಗೆ ಸೂಚಿಸಿದ ನಂತರ ನಿವಾಸಿಗಳು ಅಲ್ಲಿಂದ ತೆರಳಿದರು.


