ತುಮಕೂರು:- ಕಾಮಗಾರಿ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಎಂಜಿನಿಯರ್ ಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ತಿಪಟೂರು ವಿಭಾಗದ ಇಬ್ಬರು ಎಂಜಿನಿಯರುಗಳು ಲೋಕಾ ಬಲೆಗೆ ಬಿದ್ದವರು. ತಿಪಟೂರು ನಗರದ ಪ್ರವಾಸಿ ಮಂದಿರದ ಬಳಿ ಶಾಲೆ ದುರಸ್ತಿ ಮಾಡಿದ 6.50 ಲಕ್ಷ ರೂ. ಬಿಲ್ ಪಾವತಿಗೆ ಹೊಸದುರ್ಗ ಭಾಗದ ಗುತ್ತಿಗೆದಾರ ಸುನಿಲ್ ಎಂಬುವವರ ಬಳಿ ಆರೋಪಿತರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 34,500 ರೂ. ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಸಿ.ಸ್ವಾಮಿ ಎಂಬವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಲ್ ಮಾಡಿಕೊಡಲು ಹಣಕ್ಕೆ ಒತ್ತಾಯಿಸಿದ್ದ ಮತ್ತೊಬ್ಬ ಎಂಜಿನಿಯರ್ ಸುಹಾಸ್ ಎಂಬವರನ್ನು ತಿಪಟೂರು ಕಚೇರಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯವರ್ತಿಯಾಗಿ ಕೆಲಸ ಮಾಡಿದ ಕಂಪ್ಯೂಟರ್ ಆಪರೇಟರ್ ಹರೀಶ್ ಎಂಬುವರ ವಿಚಾರಣೆ ಮುಂದುವರಿದಿದೆ.


