ಬಸ್ ನಿಲುಗಡೆಗೆ ಆಗ್ರಹ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ–ಗದಗ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳನ್ನು ಗೊಜನೂರ ಗ್ರಾಮದಲ್ಲಿ ನಿಲುಗಡೆ ಮಾಡಿಸುವಂತೆ ಆಗ್ರಹಿಸಿ ಸೋಮವಾರ ಬೆಳಿಗ್ಗೆ ಗೊಜನೂರ ಗ್ರಾಮಸ್ಥರು ಮತ್ತು ಕರವೇ ಗ್ರಾಮ ಘಟಕದಿಂದ ಸದರಿ ಮಾರ್ಗದ ಬಸ್ಸುಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆ ಗ್ರಾ.ಪಂ ಮಾಜಿ ಸದಸ್ಯ ಶಿವರಾಜಗೌಡ ಪಾಟೀಲ ಮತ್ತು ಕರವೇ ರಾಜ್ಯ ಸಂಚಾಲಕ ಚೇತನ ಕಣವಿ ಮಾತನಾಡಿ, ನಮ್ಮೂರ ಮಾರ್ಗವಾಗಿಯೇ ಗದಗ–ಲಕ್ಷ್ಮೇಶ್ವರ ಬಸ್ಸುಗಳು ಸಂಚರಿಸಿದರೂ ಗ್ರಾಮದಲ್ಲಿ ನಿಲ್ಲಿಸುವುದಿಲ್ಲ. ಅಲ್ಲದೇ ಕಳೆದ ಹಲವು ತಿಂಗಳಿನಿಂದ ಗದಗ–ಲಕ್ಷ್ಮೇಶ್ವರ ರಸ್ತೆ ತಗ್ಗು–ಗುಂಡಿಗಳಿಂದ ಕೂಡಿದ್ದರಿಂದ ಬಸ್ಸುಗಳು ಲಕ್ಷ್ಮೇಶ್ವರದಿಂದ ಶಿರಹಟ್ಟಿ ಮಾರ್ಗವಾಗಿ ಸುತ್ತುವರೆದು ಸಂಚರಿಸುತ್ತಿವೆ. ಬರುವ ಕೆಲವೇ ಬಸ್ಸುಗಳೂ ಸಹ ನಿಲುಗಡೆ ಮಾಡದ್ದರಿಂದ ನಿತ್ಯ ಶಾಲಾ ಮಕ್ಕಳು ಬಸ್ಸು ಕಾದು ಸುಸ್ತಾಗಿ ಶಾಲೆಗೆ ಸರಿಯಾದ ಸಮಯಕ್ಕೆ ಹೋಗಲಾಗುತ್ತಿಲ್ಲ. ಸಾರ್ವಜನಿಕರೂ ಸಹ ನಿತ್ಯ ಪರದಾಡುತ್ತಿದ್ದಾರೆ. ಇದು ದೀಪದ ಕೆಳಗೆ ಕತ್ತಲು ಎನ್ನುವಂತಹ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹೆದ್ದಾರಿಯಲ್ಲಿ ಕೆಲ ಹೊತ್ತು ಈ ಮಾರ್ಗದ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿದರು. ಸ್ಥಳಕ್ಕಾಗಮಿಸಿದ ಡಿಪೋ ಮ್ಯಾನೇಜರ್ ಸವಿತಾ ಆದಿ ಮಾತನಾಡಿ, ರಜಾದಿನಗಳು, ಹಬ್ಬದ ದಿನವಾಗಿದ್ದರಿಂದ ಬಸ್ಸುಗಳು ತುಂಬಿಕೊಂಡೇ ಬರುತ್ತಿವೆ. ಒಂದಷ್ಟು ಬಸ್ಸುಗಳ ಕೊರತೆಯೂ ಇದ್ದು, ಆದಾಗ್ಯೂ ಶಾಲಾ ಅವಧಿಯಲ್ಲಿ ಈ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್ಸುಗಳನ್ನು ನಿಲುಗಡೆ ಮಾಡಲು ಸೂಚಿಸುತ್ತೇನೆ ಎಂದರು.

ಈ ವೇಳೆ ಸಂಕೇತ ಎಸ್.ಪಿ, ಮಾಂತೇಶ ಜಾಲಮ್ಮನವರ, ಎನ್.ಎಂ. ಸಂಶಿ, ವಿರೂಪಾಕ್ಷ ಪಿ. ಮಠ, ವಿರೇಶ ಕುಲಕರ್ಣಿ, ವಿಶ್ವೇಶ್ವರಯ್ಯ ಎಸ್.ಎ., ನಿಂಗನಗೌಡ ದೊಡ್ಡಗೌಡರ, ರಾಕೇಶ ಕಣವಿ, ರೋಹಿತ ಕೋರದಾಳ, ಸ್ನೇಹಾ ವಡಕಣ್ಣವರ, ರೇವತಿ ವಿ.ವಿ., ವಿಜಯಲಕ್ಷ್ಮೀ ಜಾಲಮ್ಮನವರ, ನಾಗಮ್ಮ ಶಿರಹಟ್ಟಿ ಮುಂತಾದವರಿದ್ದರು


Spread the love

LEAVE A REPLY

Please enter your comment!
Please enter your name here