ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಸಂಕದಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕಾರಣ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಶಾಲೆಯಲ್ಲಿ ಕೊಠಡಿಗಳ ಕೊರತೆಯಿದೆ. ಸಾರಿಗೆ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಶಾಲೆಗೆ ಆಟದ ಮೈದಾನವೂ ಇಲ್ಲ. ಇರುವ ಸಣ್ಣ ಮೈದಾನದಲ್ಲಿ ವಾಹನಗಳು ನಿಲ್ಲುತ್ತಿವೆ. ಇದರಿಂದಾಗಿ ಮಕ್ಕಳಿಗೂ ತೀವ್ರ ತೊಂದರೆ ಆಗುತ್ತಿದೆ. ಇನ್ನು ಶಾಲೆ ಸುತ್ತ ಕಂಪೌಂಡ್ ನಿರ್ಮಿಸಲೂ ಜಾಗೆ ಇಲ್ಲ. ಈ ಗ್ರಾಮದ ಬಕಾರಿ ಮನೆತನದವರು ಸರ್ಕಾರಿ ಶಾಲೆಗೆ 20 ಗುಂಟೆ ಜಮೀನನ್ನು ದಾನವಾಗಿ ನೀಡಿದ್ದಾರೆ. ಈ ಜಾಗೆಯಲ್ಲಿನ ನೂತನ ಕೊಠಡಿಗಳನ್ನು ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ಹಿರಿಯರಾದ ಪಕ್ಕೀರಯ್ಯ ಹಿರೇಮಠ, ದುರಗಪ್ಪ ಹರಿಜನ, ನೀಲನಗೌಡ ಪಾಟೀಲ, ಹಾಲಪ್ಪ ಸೂರಣಗಿ, ಎಸ್‌ಡಿಎಂಸಿ ಅಧ್ಯಕ್ಷ ರವಿ ಹರಿಜನ, ಶರೀಫ್ ಹರಿಜನ, ವಕೀಲರಾದ ಮೈಲಾರಪ್ಪ ದುರಗಪ್ಪ ಹರಿಜನ ಆಗ್ರಹಿಸಿದರು



