ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಕಟಾವಿಗೆ ಬಂದ ಹೆಸರು, ಈರುಳ್ಳಿ, ಗೋವಿನಜೋಳ, ಮೆಣಸಿನಕಾಯಿ, ಶೇಂಗಾ, ಸೂರ್ಯಕಾಂತಿ ಬೆಳೆಗಳಿಗೆ ಹಾನಿ ಉಂಟಾಗಿದೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ಹಣ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ವಿ.ಆರ್. ನಾರಾಯಣರೆಡ್ಡಿ ಬಣದ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಆಗ್ರಹಿಸಿದ್ದಾರೆ.
ಹಿಂಗಾರು ಹಂಗಾಮು ಬಿತ್ತನೆ ಮಾಡಲು ರೈತರಿಗೆ ಬೀಜ, ಗೊಬ್ಬರ ಕೊಳ್ಳಲು ಹಣದ ಅಗತ್ಯವಿರುವುದರಿಂದ ಶೀಘ್ರದಲ್ಲಿಯೇ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಈಗಾಗಲೇ ಹಿಂಗಾರು ಹಂಗಾಮು ಬಿತ್ತನೆ ಮಾಡಲು ರೈತರು ಭೂಮಿಯನ್ನು ಹದಗೊಳಿಸುತ್ತಿದ್ದು, ಬಿತ್ತನೆ ಮಾಡಲು ಕಡಲೆ, ಜೋಳ, ಕುಸುಬೆ ಬೀಜ ಹಾಗೂ ಗೊಬ್ಬರ ಸಮರ್ಪಕವಾಗಿ ದೊರೆಯುವಂತೆ ಕೃಷಿ ಇಲಾಖೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.