ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಚರ್ಚ್‌ನಲ್ಲಿ ಮತಾಂತರಗೊಳ್ಳಲು ನಿರಾಕರಿಸಿದ ಭೋವಿ ಸಮಾಜದ ವ್ಯಕ್ತಿಯ ಸಾವಿನ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಬುಧವಾರ ಶಿರಹಟ್ಟಿಯಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕಾಧ್ಯಕ್ಷ ಸಂತೋಷ ಕುರಿ, ಕಳೆದ ಮೂರು ವರ್ಷಗಳಲ್ಲಿ ಕ್ರಿಶ್ಚಿಯನ್ನರು ಮುಗ್ಧ ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ. ಭೋವಿ ಸಮಾಜದ ವ್ಯಕ್ತಿಯ ಶವ ನಿಗೂಢವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿದೆ. ಈ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಈಗಾಗಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ. ಅ. 27ರಂದು ತಿಪ್ಪಣ್ಣ ಚಂದ್ರಪ್ಪ ವಡ್ಡರ ಯಾವದೇ ಆಮಿಷಗಳಿಗೆ ಬಗ್ಗದಿರುವುದನ್ನು ಮನಗಂಡು ಚರ್ಚ್‌ನ ಅಧಿಕಾರಿಗಳು ಆತನನ್ನು ಕರೆತಂದು ವಿವಿಧ ರೀತಿಯ ಚಿತ್ರಹಿಂಸೆ ನೀಡಿ ಕೊಲೆ ಮಾಡಿ ನೇಣು ಹಾಕಿಕೊಂಡಂತೆ ಸನ್ನಿವೇಶ ಸೃಷ್ಟಿಸಿದ್ದು, ಡೆತ್‌ನೋಟನ್ನು ಶಿರಹಟ್ಟಿ ಪೋಲೀಸ್ ಠಾಣೆಯ ಪೇದೆಯೊಬ್ಬರು ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮೃತ ಕುಟುಂಬಕ್ಕೆ ೫೦ ಲಕ್ಷ ಪರಿಹಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರಣ್ಣ ಅಂಗಡಿ, ಪರಶುರಾಮ ಡೊಂಕಬಳ್ಳಿ, ಯಲ್ಲಪ್ಪ ಇಂಗಳಗಿ, ಪ್ರಕಾಶ ಶಿರಹಟ್ಟಿ, ಮುತ್ತು ಆಕಳದ, ಮುತ್ತು ಬೂದಿಹಾಳ, ಆನಂದ ಸತ್ಯಮ್ಮನವರ, ಗೌತಮ ಹಳ್ಳೆಮ್ಮನವರ, ದೇವಪ್ಪ ಪೂಜಾರ, ಮಂಜುನಾಥ ಸೊಂಟನೂರ, ನಾಗರಾಜ ಇಂಗಳಗಿ ಮುಂತಾದವರು ಉಪಸ್ಥಿತರಿದ್ದರು.


