ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ರೈತಪರ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟ ತೀವ್ರಗೊಳ್ಳುತ್ತಿದೆ.
ಆದರಹಳ್ಳಿಯ ಕುಮಾರ ಮಹಾರಾಜ ಸ್ವಾಮೀಜಿ ಸೋಮವಾರದಿಂದಲೇ ಉಪವಾಸ ಕೈಗೊಂಡಿದ್ದು, ಸರಕಾರ ಖರೀದಿ ಕೇಂದ್ರ ಪ್ರಾರಂಭಿಸುವವರೆಗೂ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇವರಿಗೆ ಕುಂದಗೋಳದ ಶ್ರೀ ಬಸವಣ್ಣಜ್ಜನವರು ಸಾಥ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ರೈತರು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದಾರೆ. ನಾಲ್ಕು ದಿನ ಕಳೆದರೂ ಸಹ ಜನಪ್ರತಿನಿಧಿಗಳು ಬಂದಿಲ್ಲ. ಇದು ರೈತರನ್ನು ರೊಚ್ಚಿಗೆಬ್ಬಿಸಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರೈತರ ಹೋರಾಟದ ಅರಿವಿಲ್ಲ. ಮೊದಲು ಬೆಂಬಲ ಬೆಲೆಯಲ್ಲಿ ಗೋವಿನಜೋಳ ಖರೀದಿಸಿ, ನಂತರ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆಯ ಹಣ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ರೈತರ ಸಮಸ್ಯೆಗೆ ಸ್ಪಂದಿಸಲಿ ಎಂದು ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಬೆಂಬಲ ಬೆಲೆ ಆಸೆ ತೋರಿಸಿದ್ದರಿಂದ ಈ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆದಿದ್ದಾರೆ. ಆದರೆ ಒಕ್ಕಣಿ ಮುಗಿದರೂ ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ಸರಕಾರಗಳು ರೈತರ ಕಣ್ಣೊರೆಸುವ ತಂತ್ರ ಮಾಡುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲವೆಂದರೆ ರೈತರು ಹೇಗೆ ಜೀವನ ಮಾಡಬೇಕು ಎಂದು ಪ್ರಶ್ನಿಸಿದರು.
ಸಂಜೆ ಧರಣಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್ ಮತ್ತು ಉಪವಿಭಾಗಾಧಿಕಾರಿ ಗಂಗಪ್ಪ ಎಂ ಅವರು ಸತ್ಯಾಗ್ರಹ ನಿರತ ಶ್ರೀಗಳು ಮತ್ತು ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಈ ಹೋರಾಟದ ಬಗ್ಗೆ ಸಾಕಷ್ಟು ಕಳಕಳಿ ವ್ಯಕ್ತಪಡಿಸಿದ್ದು, ನ. 20ರಂದು ನಡೆಯಲಿರುವ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ಮಾಡಲಿದ್ದಾರೆ. 2 ದಿನಗಳಲ್ಲಿ ರೈತರ ಬೇಡಿಕೆ ಈಡೇರುವ ಸಿಹಿ ಸುದ್ದಿ ಸಿಗಲಿದೆ. ದಯವಿಟ್ಟು ಉಪವಾಸ ಕೈಬಿಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆದ್ರಳ್ಳಿ ಶ್ರೀಗಳು, ರೈತರ ನ್ಯಾಯಯುತ ಬೇಡಿಕೆ ಈಡೇರಬೇಕು. ರೈತರು 4 ದಿನಗಳಿಂದ ಅನೇಕ ರೀತಿಯ ಹೋರಾಟ ಮಾಡಿದರೂ ಸ್ಥಳೀಯವಾಗಿಯೇ ಇರುವ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಣ್ಣೆತ್ತಿಯೂ ನೋಡಿಲ್ಲ. ಅವರ ಬಗ್ಗೆ ನಮಗೆ ವಿಶ್ವಾಸ ಇಲ್ಲದಂತಾಗಿದೆ. ಇನ್ನೇನಿದ್ದರೂ ನಮ್ಮ ಬೇಡಿಕೆ ಈಡೇರಿದ ಸರ್ಕಾರದ ಆದೇಶದೊಂದಿಗೆ ಅಧಿಕಾರಿಗಳು ಬರಬೇಕು. ಅಲ್ಲಿಯವರೆಗೂ ಹನಿ ನೀರೂ ಕುಡಿಯುವುದಿಲ್ಲ. ರೈತರಿಗಾಗಿ ಪ್ರಾಣ ಹೋದರೂ ಸರಿ ಎಂದು ಪಟ್ಟು ಹಿಡಿದಿದ್ದರಿಂದ ಅಧಿಕಾರಿಗಳು ವಾಪಸ್ ಹೋದರು.
ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ಸುಜಾತಾ ದೊಡ್ಡಮನಿ, ನಾಗರಾಜ ಚಿಂಚಲಿ, ವಕೀಲ ರವಿಕಾಂತ ಅಂಗಡಿ, ಸೋಮಣ್ಣ ಡಾಣಗಲ್ಲ ಮಾತನಾಡಿದರು. ಈ ವೇಳೆ ಟಾಕಪ್ಪ ಸಾತಪುತೆ, ಚನ್ನಪ್ಪ ಷಣ್ಮುಖಿ, ಬಸಣ್ಣ ಹಂಜಿ, ಬಸವರಾಜ ಮೇಲ್ಮುರಿ, ಪ್ರವೀಣ ನೆಲೊಗಲ್ಲ, ಅಮರೇಶ ತೆಂಬದಮನಿ, ನೀಲಪ್ಪ ಶರಸೂರಿ, ನೀಲಪ್ಪ ಕರ್ಜೆಕಣ್ಣವರ, ದಾದಾಪೀರ್ ಮುಚ್ಛಾಲೆ, ರಮೇಶ ಹಂಗನಕಟ್ಟಿ, ಪ್ರಭು ಮತ್ತಿಕಟ್ಟಿ, ವಿರುಪಾಕ್ಷಪ್ಪ ಮುದಕಣ್ಣವರ, ಹೊನ್ನಪ್ಪ ವಡ್ಡರ, ಮಂಜುನಾಥ ಛಲವಾದಿ, ಅರುಣಕುಮಾರ ಪೂಜಾರ ಮತ್ತಿತರರು ಇದ್ದರು.
ಉಪವಾಸ ಕೈಗೊಂಡಿರುವ ಕುಮಾರ ಮಹಾರಾಜ ಸ್ವಾಮೀಜಿಯವರ ಆರೋಗ್ಯ ಹದಗೆಡುತ್ತಿರುವುದನ್ನು ಕಂಡು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿರುವ ವೇದಿಕೆಯಿಂದ ಹೊರ ಬಂದು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಶಾಸಕರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಪೊಲೀಸರ ವಿನಂತಿ ಮೇರೆಗೆ ಮತ್ತೆ ರಸ್ತೆ ತಡೆ ಕೈಬಿಟ್ಟು ವೇದಿಕೆಗೆ ತೆರಳಿದರು.


