ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸ ಮುಂತಾದ ಪರಂಪರೆಗಳನ್ನು ಉಳಿಸಿ, ಬೆಳೆಸುವುದರೊಂದಿಗೆ, ವಿವಿಧ ಕಲೆಗಳ ಮೂಲಕ ಸಮಾಜಕ್ಕೆ ಮನರಂಜನೆಯೊಂದಿಗೆ ಅವರಿಗೆ ಮೌಲಿಕ ಹಾಗೂ ಆದರ್ಶದ ವಿಚಾರಗಳನ್ನು ತಿಳಿಸುತ್ತ, ಸಮಾಜದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ನಿರ್ಮಿಸುವದುರೊಂದಿಗೆ ಸಾತ್ವಿಕ ಸಮಾಜದಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಲಾವಿದರು ಹಾಗೂ ಸಾಂಸ್ಕೃತಿಕ ಸಂಘಟನೆಗಳಿಗಳು ಕೆಲಸ ಮಾಡುತ್ತಿವೆ. ಇವರಿಗೆ ಸರ್ಕಾರವು ಜಾರಿಗೊಳಿಸಿದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಶಂಕ್ರಣ್ಣ ಸಂಕಣ್ಣವರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಗದಗ ಜಿಲ್ಲೆಯ ಸಾಂಸ್ಕೃತಿಕ ಸಂಘಟನೆಗಳು ಹಾಗೂ ಜಿಲ್ಲೆಯ ಸಮಸ್ತ ಕಲಾವಿದರ ವತಿಯಿಂದ ಬುಧವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಅವರಿಗೆ ಮನವಿ ಅರ್ಪಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಕಲಾವಿದರಾದ ವಿರೂಪಾಕ್ಷಪ್ಪ ಕ್ಷತ್ರಿಯ, ಐ.ಕೆ. ಕಮ್ಮಾರ, ಈರಣ್ಣ ಅಂಗಡಿ, ಸೋಮು ಚಿಕ್ಕಮಠ (ನಟರಂಗ), ಶಿವು ಡಿ.ಭಜೆಂತ್ರಿ, ಬಸವರಾಜ ಈರಣ್ಣವರ, ಸೂರಜ್ ಮಯೇಕರ್, ದ್ಯಾಮಣ್ಣ ಬಡಿಗೇರ, ಸುಭಾಷ ಮಳಗಿ, ಅಶೋಕ ಸುತಾರ, ರಾಜು ಪೇಂಟರ್, ಆರ್.ಆಯ್. ಅಗಸರ, ರವಿಕುಮಾರ ರಂಗಪ್ಪ ದ್ಯಾವಣಸಿ, ಪ್ರಕಾಶ ಕ.ಬಂದೂನವರ, ಯಲ್ಲಪ್ಪ ಚಂದಣ್ಣವರ, ಪೂಜಾ ಬೇವೂರ, ಲಕ್ಷ್ಮೀ ಮಡಿವಾಳರ, ಜಿ.ಸಾವಿತ್ರಿ, ಡಾ. ಗೋವಿಂದಪ್ಪ ವೇಶಗಾರ, ಆನಂದಪ್ಪ ಜಾಲಿಹಾಳ, ಮುತ್ತು ಕಲ್ಲಪ್ಪ ಕುರಿ, ಖಾಜೇಸಾಬ ಬೂದಿಹಹಾಳ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ ಸಂಘಟನೆಗಳ ಮುಖ್ಯಸ್ಥರು ಹಾಗೂ ಕಲಾವಿದರು ಪಾಲ್ಗೊಂಡಿದ್ದರು.
ಹವ್ಯಾಸಿ ರಂಗಕರ್ಮಿ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಚಿ. ಬಡಿಗೇರ(ನರೇಗಲ್ಲ) ಮಾತನಾಡಿ, ಜೀವನಪೂರ್ತಿ ಕಲಾಸೇವೆಗೈದ ಕಲಾವಿದರಿಗೆ ಸದ್ಯ ನೀಡುತ್ತಿರುವ ಮಾಸಾಶನವನ್ನು 5 ಸಾವಿರ ರೂಗಳಿಗೆ ಹೆಚ್ಚಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತೇಜಿಸಲು ಪ್ರತಿವರ್ಷ ತಪ್ಪದೇ ಧನ ಸಹಾಯ ಯೋಜನೆ ಜಾರಿ ಮಾಡಬೇಕು. ಬಾಕಿ ಇರುವ ಎಲ್ಲ ಕಲಾವಿದರ ಸಂಭಾವನೆಯನ್ನು ಕೂಡಲೇ ಬಿಡುಗಡೆಗೊಳಿಸಲು ಆದೇಶಿಸಬೇಕು. ನಾಟಕೋತ್ಸವ, ಕವಿಗೋಷ್ಠಿ, ವಿಚಾರ ಸಂಕಿರಣ ಮುಂತಾದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸಬೇಕು ಇವೇ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.



