ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅಲ್ಪವಯಸ್ಕ ಬಾಲಕನನ್ನು ಒತ್ತಾಯದಿಂದ ಮತಾಂತರಗೊಳಿಸಿ ಜೀತಕ್ಕಿಟ್ಟುಕೊಂಡಿದ್ದು, ಬಾಲಕನಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಶಿರಹಟ್ಟಿಯಲ್ಲಿ ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಸಂಚಾಲಕ ಸಂತೋಷ ಕುರಿ, ಜಿಲ್ಲೆಯಾದ್ಯಂತ ಮುಗ್ಧ ಹಿಂದೂಗಳನ್ನು ಬಲವಂತದಿಂದ ಮತಾಂತರಗೊಳಿಸುವ ಜಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಲಕ್ಷ್ಮೇಶ್ವರದಲ್ಲಿ ಗದುಗಿನ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿಗೆ ಅಧ್ಯಯನಕ್ಕೆ ಬರುತ್ತಿದ್ದ ಹಿಂದೂ ಯುವತಿಯೋರ್ವಳನ್ನು ಲಕ್ಷ್ಮೇಶ್ವರದ ಮುಸ್ಲಿಂ ಯುವಕನೋರ್ವ ಪುಸಲಾಯಿಸಿ ಮತಾಂತರಗೊಳಿಸಿ ಲವ್ ಜಿಹಾದ್ ನಡೆಸಿದ್ದಾನೆ. ಯುವತಿಯ ಪಾಲಕರು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಲಕ್ಷ್ಮೇಶ್ವರದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯೋರ್ವನನ್ನು ಪುರಸಭೆಯ ಮುಂದೆ ಚಹದ ಅಂಗಡಿ ನಡೆಸುತ್ತಿರುವ ವ್ಯಕ್ತಿ ಬೆದರಿಸಿ ಮತಾಂತರಗೊಳಿಸಿ ತಮ್ಮ ಹೋಟೆಲ್‌ನಲ್ಲಿ ಬಲವಂತವಾಗಿ ಕೆಲಸಕ್ಕಿರಿಸಿಕೊಂಡಿದ್ದರು.
ಇಂತಹ ಅನೇಕ ಮತಾಂತರ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಪರೋಕ್ಷವಾಗಿ ಮತಾಂಧರಿಗೆ ಸಹಕರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮುಗ್ಧ ಹಿಂದೂಗಳು ಜೀವನ ನಿರ್ವಹಣೆ ಮಾಡುವದೇ ಕಷ್ಟವಾಗಿದೆ. ಆದ್ದರಿಂದ ತಾವು ಮಧ್ಯಪ್ರವೇಶಿಸಿ ಕೂಡಲೇ ಜೀತಕ್ಕಿಟ್ಟುಕೊಂಡಿರುವ ಹೋಟೆಲ್ ಮಾಲೀಕರ ಮೇಲೆ ಸೂಕ್ತ ಪ್ರಕರಣ ದಾಖಲಿಸಿ ಹಿಂದೂಗಳಿಗೆ ರಕ್ಷಣೆ ನೀಡುವಂತೆ ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೂಳಪ್ಪ ಕರಿಗಾರ, ಪರಶುರಾಮ ಡೊಂಕಬಳ್ಳಿ, ರಮೇಶ ಬಟ್ಟೂರ, ಬೀರೇಶ ಬಟ್ಟೂರ, ಸಂತೋಷ ಕಂಬಳಿ, ಮಾರುತಿ ಕುಳಗೇರಿ, ಮಲ್ಲಪ್ಪ, ನಾಗರಾಜ್, ಮುತ್ತು, ಲೋಕೇಶ, ಬೀರೇಶ, ಪ್ರಶಾಂತ, ಆತ್ಮಾನಂದ ಮುಂತಾದವರು ಉಪಸ್ಥಿತರಿದ್ದರು.


