ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪುರಸಭೆಯ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದು, ಪುನಃ ನೇಮಿಸಿಕೊಳ್ಳಬೇಕು ಎಂದು ಗುತ್ತಿಗೆ ಕಾರ್ಮಿಕರು ಶನಿವಾರ ಆಡಳಿತಾಧಿಕಾರಿ ಹಾಗೂ ಗದಗ ಜಿಲ್ಲಾ ಉಪವಿಭಾಗಾಧಿಕಾರಿ ಎ.ಸಿ ಗಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗುತ್ತಿಗೆದಾರ ಪೌರಕಾರ್ಮಿಕರು ಮಾತನಾಡಿ, ಕಳೆದ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ನ್ಯಾಯ ಸಿಗುತ್ತಿಲ್ಲ. ಕಳೆದ ಮಾರ್ಚ್‌ನಿಂದ ನಾಲ್ಕು ತಿಂಗಳು ಕಾರ್ಯನಿರ್ವಹಿಸಿದ್ದಾರೆ. ಅದರಲ್ಲಿ ಗುತ್ತಿಗೆದಾರರ 2 ತಿಂಗಳ ಗೌರವಧನ ಕೊಟ್ಟು ಇನ್ನು ಎರಡು ತಿಂಗಳು ಗೌರವಧನ ಕೊಟ್ಟಿಲ್ಲ. 10 ಜನರಲ್ಲಿ 6 ಜನರನ್ನು ತೆಗೆದುಕೊಂಡಿದ್ದು, ನಾಲ್ಕು ಜನರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಈ ಎಲ್ಲರನ್ನೂ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಲ್ಲಿ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ವಿನಂತಿಸಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ರಾಮಪ್ಪ ಗಡದವರ ಹಾಗೂ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣಪ್ಪ ನಂದೆಣ್ಣವರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ 10 ಜನರನ್ನು ನೇಮಿಸಿಕೊಳ್ಳಲು ಆಡಳಿತ ಮಂಡಳಿಯು ಠರಾವು ಮಾಡಿದ್ದು, ಅವರಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಇರುವ ಸಮಸ್ಯೆಗಳನ್ನು ಬಗೆಹರಿಸಿ ಕೂಡಲೇ ಅನುಕೂಲತೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆ ಪೌರಕಾರ್ಮಿಕರಾದ ಕಲ್ಯಾಣಕುಮಾರ ಹಾದಿಮನಿ, ಅಭಿಜಿತ್ ನಂದೆಣ್ಣವರ, ರಾಮಪ್ಪ ಅಯ್ಯಣ್ಣವರ, ನೀಲಪ್ಪ ಶಿರಹಟ್ಟಿ, ಪರಮೇಶ ಗಡದವರ, ಅರುಣ ನಂದೆಣ್ಣವರ, ಹೊನ್ನಪ್ಪ ಮೇಗಲಮನಿ, ಪ್ರಕಾಶ ಗಡದವರ, ಮಂಜುನಾಥ ದೊಡ್ಡಮನಿ, ನೀಲಪ್ಪ ಭಜಕ್ಕನವರ ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹನುಮಂತ ನಂದೆಣ್ಣವರ ಮುಂತಾದವರಿದ್ದರು.



