ವಿಜಯಸಾಕ್ಷಿ ಸುದ್ದಿ, ಗದಗ: ಹಳೇ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೆ ಆಗ್ರಹಿಸಿ ಬೃಹತ್ ಸಮಾವೇಶ ನಡೆಸಲು ನೌಕರರೊಂದಿಗೆ ಚರ್ಚಿಸಿ, ನಿರ್ಧರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 2.93 ಲಕ್ಷ ಮಂದಿ ಎನ್‌ಪಿಎಸ್ ನೌಕರರು ಇದ್ದಾರೆ. ಒಪಿಎಸ್‌ಗಾಗಿ ಸರ್ಕಾರ ಶೇ. 10ರಷ್ಟು ಮೊತ್ತ ನೀಡಿದರೆ ವರ್ಷಕ್ಕೆ 3 ಸಾವಿರ ಕೋಟಿ ರೂ ಹೊರೆ ಆಗುತ್ತದೆ. ಆದರೆ, ರಾಜ್ಯದಲ್ಲಿ 2.73 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಅದರಿಂದ ಸುಮಾರು 2,500 ಕೋಟಿ ರೂ ಉಳಿತಾಯ ಆಗುತ್ತಿದೆ. ಎನ್‌ಪಿಎಸ್ ಕಮಿಟಿ ಅಧ್ಯಕ್ಷರಾದ ಉಮಾ ಮಹಾದೇವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತಿಳಿಸಿಕೊಡಲಾಗಿದೆ. ಎನ್‌ಪಿಎಸ್‌ನಿಂದ ಒಪಿಎಸ್ ಆಗಬೇಕು. ಅದು ಬಿಟ್ಟು ಬೇರೆ ಯಾವುದೇ ನಿರ್ಣಯಕ್ಕೂ ಒಪ್ಪುವುದಿಲ್ಲ ಎಂಬುದನ್ನು ತಿಳಿಸಲಾಗಿದೆ ಎಂದರು.
ಒಪಿಎಸ್ ಜಾರಿಗೆ ಆಗ್ರಹಿಸಿ ಎನ್‌ಪಿಎಸ್ ನೌಕರರು ಪ್ರತಿಭಟನೆ ಆಯೋಜನೆಗೆ ಒತ್ತಡ ಹೇರುತ್ತಿರುವ ವಿಷಯವನ್ನು ಸಿಎಂ ಗಮನಕ್ಕೂ ತರಲಾಗಿದೆ. ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಈ ವಿಷಯ ಪ್ರಸ್ತಾಪಿಸಿದ್ದು, ಈ ಬಗ್ಗೆ ಶೀಘ್ರವೇ ವರದಿ ತರಿಸಿಕೊಂಡು ಸಚಿವ ಸಂಪುಟದಲ್ಲಿ ಮಂಡಿಸಿ, ಎನ್‌ಪಿಎಸ್ ಅನ್ನು ಒಪಿಎಸ್ ಮಾಡುವಂತೆ ಮುಖ್ಯಮಂತ್ರಿ ಅವರಿಗೂ ಒತ್ತಾಯಿಸಲಾಗಿದೆ ಎಂದರು.
ಈ ಸಂಬಂಧ ಸರ್ಕಾರದ ಗಮನ ಸೆಳೆಯಲು ರಾಜ್ಯದ ಎಲ್ಲಾ ಎನ್‌ಪಿಎಸ್ ನೌಕರರನ್ನು ಒಂದೆಡೆ ಸೇರಿಸಿ ಸಮಾವೇಶ ಮಾಡುವ ಉದ್ದೇಶವಿದೆ. ಪ್ರತಿಭಟನೆಯನ್ನು ಯಾವಾಗ, ಹೇಗೆ ಮಾಡಬೇಕು ಎಂಬುದರ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ, ನಿರ್ಧರಿಸಲಾಗುವುದು ಎಂದು ತಿಳಿಸಿದರು.



