ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಭರಮದೇವರ ಸರ್ಕಲ್ ಹತ್ತಿರದ ಸರ್ಕಾರಿ ಉರ್ದು ಶಾಲೆ ಜಾಗ ಒತ್ತುವರಿ ಮಾಡಿಕೊಂಡು ಲಾಭದ ಉದ್ದೇಶಕ್ಕಾಗಿ ನಿರ್ಮಿಸುತ್ತಿರುವ ವ್ಯಾಪಾರಿ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೋಮವಾರ ಲಕ್ಷ್ಮೇಶ್ವರದ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮತ್ತು ಸ್ಥಳೀಯ ಪುರಸಭೆಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಸರ್ಕಾರಿ ಉರ್ದು ಶಾಲೆ ಕಟ್ಟಡ ಧಾರವಾರ ಜಿಲ್ಲಾ ಸ್ಕೂಲ್ ಬೋರ್ಡ್ ಹೆಸರಿನಲ್ಲಿದೆ. ಈ ಶಾಲೆಯ ಜಾಗದಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದೆ. ಶಾಲಾ ಕಂಪೌಂಡ್ ಸಣ್ಣದಾಗಿಸಿ ಪೂರ್ವದ ರಸ್ತೆಯ ಕಡೆಗೆ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ಉದ್ದೇಶಕ್ಕಾಗಿ ಯಾವುದೇ ಪರವಾನಗಿ ಇಲ್ಲದೇ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತ ಮತ್ತು ಬೆಲೆಬಾಳುವ ಸರ್ಕಾರಿ ಜಾಗೆಯಲ್ಲಿ ಅಂಜುಮನ್ ಸಂಸ್ಥೆಯವರಿಗೆ ಮಳಿಗೆ ನಿರ್ಮಿಸಿಕೊಳ್ಳಲು ಕ್ಷೇತ್ರಶಿಕ್ಷಣಾಧಿಕಾರಿ, ಪಿಡಬ್ಲುಡಿ, ಪುರಸಭೆ ಅಧಿಕಾರಿಗಳು, ಧಾರವಾಡ ಡಿಸ್ಟ್ರಿಕ್ಟ್ ಉರ್ದು ಸ್ಕೂಲ್ ಬೋರ್ಡ್ನವರೂ ಸಹ ಸಹಕಾರ ನೀಡಿದ್ದಾರೆ.
ಈಗಾಗಲೇ ಮಾನ್ಯ ಉಚ್ಛ ನ್ಯಾಯಾಲಯದ ಧಾರವಾಡ ಪೀಠ ಲಕ್ಷ್ಮೇಶ್ವರದಲ್ಲಿ ಅತಿಕ್ರಮಣ ತೆಗೆಯಿಸುವಂತೆ ಆದೇಶಿಸಿದೆ. ಕಟ್ಟಡ ಕಟ್ಟಲು ಅವಕಾಶ ಕೊಡಬಾರದೆಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದೇವೆ. ಆದಾಗ್ಯೂ ಯಾರದ್ದೋ ಕುಮ್ಮಕ್ಕಿನಿಂದ ರಾಜಾರೋಷವಾಗಿ ಕಟ್ಟಡ ನಿರ್ಮಾಣ ಕಾರ್ಯ ಮುಂದುವರೆದಿದೆ. ಒಂದು ವೇಳೆ ಸಾರ್ವಜನಿಕರ ಮನವಿ ಧಿಕ್ಕರಿಸಿದರೆ ಯಾವುದೆ ಮುನ್ಸೂಸೂಚನೆ ನೀಡದೆ ಜನರು ಉಪವಾಸ ಸತ್ಯಾಗ್ರಹ, ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಆಗ್ರಹಿಸಲಾಗಿದೆ.
ಈ ವೇಳೆ ಪರಮೇಶ ಲಮಾಣಿ, ಗುರಪ್ಪ ಮುಳಗುಂದ, ಮಂಜುನಾಥ ಮಾಗಡಿ, ಬಸವರಾಜ ಗೋಡಿ, ಮಲ್ಲನಗೌಡ ಪಾಟೀಲ, ಈರಪ್ಪ ರೋಣದ, ಬಸವಣ್ಣೆಪ್ಪ ಮುಳಗುಂದ, ವಿರೂಪಾಕ್ಷಪ್ಪ ಬಳಿಗಾರ, ಚಂದ್ರಶೇಖರ ದಾನಿ, ನಾಗಪ್ಪ ಬಾರಕೇರ, ಬಸವರಾಜ ಕರ್ಜೆಕಣ್ಣವರ, ಪ್ರವೀಣ ಪಾಟೀಲ, ಕಿರಣ ಮ್ಯಾಗೇರಿ, ಮಲ್ಲಪ್ಪ ಅಂಕಲಿ, ಶ್ರೀಕಾಂತ ಪಾಟೀಲ, ಫಕ್ಕಿರೇಶ ಮುಳಗುಂದ, ಮಂಜು ಮುಳಗುಂದ, ಬಾಬು ಬಾಕಳೆ, ಬಸವರಾಜ ಅರಳಿ, ವಿನಾಯಕ ಮ್ಯಾಗೇರಿ, ಲೋಹಿತ ಬುರಡಿ, ಚೇತನ ಹೆಬ್ಬಾಳ ಸೇರಿ ಅನೇಕರಿದ್ದರು.



