ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಮಾತನಾಡುವಾಗ ಮೈಸೂರು ದಸರಾದಲ್ಲಿ ಸನಾತನ ಧರ್ಮದವರು ಮಾತ್ರ ಚಾಮುಂಡಿ ದೇವಿಗೆ ಹೂ ಮುಡಿಸಬೇಕು. ಹೊರತು ಒಬ್ಬ ಸಾಮಾನ್ಯ ದಲಿತ ಹೆಣ್ಣು ಮಕ್ಕಳಿಗೆ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಇಡೀ ರಾಜ್ಯದ ದಲಿತ ಮಹಿಳೆಯರಿಗೆ ಅವಮಾನ ಮಾಡಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ವಿಭಾಗ ರಾಜ್ಯಾಧ್ಯಕ್ಷೆ ಸಬಿಹಾ ಪಟೇಲ್ ಅಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂತಹ ಕೊಳಕು ಮನಸ್ಥಿತಿಯ ಮತ್ತು ಕೋಮು ಸಂಘರ್ಷದ, ಪ್ರಚೋದನಕಾರಿ ಹೇಳಿ ನೀಡಿರುವ ಇವರನ್ನು ವಿಡಿಯೋ ಆಧಾರದ ಮೇಲೆ ಎಸ್ಸಿ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳಿಸಬೇಕು ಎಂದಿದ್ದಾರೆ.
ಶಾಸಕ ಬಸವನಗೌಡ ಯತ್ನಾಳ ಅವರು ದಲಿತರ, ಅಲ್ಪಸಂಖ್ಯಾತ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ನಿರಂತರವಾಗಿ ಕೊಡುತ್ತಿದ್ದಾರೆ. ಸಮಾಜದಲ್ಲಿ ಇಂಥ ಕೋಮುಪ್ರಚೋದನೆ ನೀಡಿ ಅಶಾಂತಿಗೆ ಕಾರಣರಾಗುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಶಾಸಕತ್ವ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.