ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಜೈನ್ ಬಸದಿಗಳನ್ನು ಜೀರ್ಣೋದ್ಧಾರ ಮಾಡಬೇಕೆಂದು ಆಗ್ರಹಿಸಿ ಗದಗ ಜಿಲ್ಲಾ ದಿಗಂಬರ ಜೈನ ಸಂಘದ ವತಿಯಿಂದ ಮೈಸೂರಿನ ಪುರಾತತ್ವ ಸಂগ্রಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜ್ ಎ ಅವರನ್ನು ಭೇಟಿಯಾಗಿ ಅಗತ್ಯ ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಆಧೀನಕ್ಕೆ ಒಳಪಡುವ ಗದಗ ಜಿಲ್ಲೆಯ ಜೈನ ಬಸದಿಗಳಾದ ರೋಣ ಪಟ್ಟಣದ ಭಗವಾನ್ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಮಂದಿರ ಜೀರ್ಣಾವಸ್ಥೆಯಲ್ಲಿದ್ದು, ಮಂದಿರದ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ಒತ್ತುವರಿ ಮಾಡಲಾಗಿದೆ. ಮುಳಗುಂದ ಪಟ್ಟಣದ ಗುಡ್ಡದಲ್ಲಿರುವ ತ್ರಿಕೂಟ ಜಿನಾಲಯ ಹಾಗೂ ಭಗವಾನ್ ಶ್ರೀ 1008 ಚಂದ್ರಪ್ರಭು ತೀರ್ಥಂಕರರ ಮಂದಿರಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ.
ಇದೇ ರೀತಿಯಲ್ಲಿ ಲಕ್ಷ್ಮೇಶ್ವರ ಪಟ್ಟಣದ ನೇಮಿನಾಥ ಬಸದಿ (ಶಂಖ ಬಸದಿ) ಕೂಡ ಶಿಥಿಲವಾಗಿದ್ದು, ಗದಗ ಪ್ರವಾಸದಲ್ಲಿರುವ ತಾವು ಈ ಸ್ಥಳಗಳಿಗೆ ಸ್ವತಃ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಪಾಳು ಬಿದ್ದಿರುವ ಜೈನ ಮಂದಿರಗಳನ್ನು ಜೀರ್ಣೋದ್ಧಾರ ಮಾಡಲು ತುರ್ತು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ವಿನಂತಿಸಿದರು.
ಮನವಿ ಸ್ವೀಕರಿಸಿದ ಆಯುಕ್ತ ದೇವರಾಜ್ ಅವರು ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಉಪಾಧ್ಯಕ್ಷ ಎಂ.ಟಿ. ಕಬ್ಬಿಣ, ಪಿ.ಜಿ. ನಾವಳ್ಳಿ, ಕಾರ್ಯದರ್ಶಿ ಪ್ರಕಾಶ ಮುತ್ತಿನ, ಜಂಟಿ ಕಾರ್ಯದರ್ಶಿ ಸಂಕಪ್ಪ ನಾವಳ್ಳಿ, ಪ್ರಾಚ್ಯವಸ್ತು ಸಂಶೋಧಕ ಅ.ದ. ಕಟ್ಟಿಮಣಿ ಮುಂತಾದವರಿದ್ದರು.



