ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ವರ್ಗಾವಣೆಗೆ ಒತ್ತಾಯಿಸಿ ಡಿ. 12ರಂದು ಶಿರಹಟ್ಟಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಸಂಸ್ಥಾಪಕ ರಾಜು ಖಾನಪ್ಪನವರ ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂ ವಿರೋಧಿ ನಡೆ ಅನುಸರಿಸುತ್ತಿರುವ ಪಿಎಸ್‌ಐ ಈರಣ್ಣ ರಿತ್ತಿ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಶಿರಹಟ್ಟಿ ತಹಸೀಲ್ದಾರರ ಕಚೇರಿ ಎದುರು 12 ದಿನಗಳಿಂದ ಧರಣಿ ನಡೆಸಲಾಗುತ್ತಿದೆ. ಆದರೆ ನಮ್ಮ ಹೋರಾಟಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಡಿ. 12ರಂದು ಬಂದ್ ಕರೆ ನೀಡಲಾಗಿದೆ. ಶಿರಹಟ್ಟಿ ಪಟ್ಟಣದ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಒತ್ತಾಯಿಸಿದರು.
ಪಿಎಸ್‌ಐ ರಿತ್ತಿ ಮರಳು ದಂಧೆ, ಇಸ್ಪೀಟ್, ಗೋವುಗಳ ಹತ್ಯೆ ಸಹಿತ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕನಕದಾಸ ಜಯಂತಿ ಸಂದರ್ಭದಲ್ಲಿಯೂ ಕುರುಬರು ಮತ್ತು ದಲಿತ ಯುವಕರ ಮೇಲೆ ಲಾಠಿ ಪ್ರಹಾರ ಮಾಡಿದ್ದರು. ಲಕ್ಷ್ಮೇಶ್ವರದಲ್ಲಿ ನಡೆದ ದುರ್ಗಾದೇವಿ ಮೆರಣಿಗೆಯಲ್ಲೂ ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಈಗ ಲಂಬಾಣಿ ಸಮಾಜದ ಅಮಾಯಕ ಯುವಕನಿಗೆ ಮನಬಂದಂತೆ ಥಳಿಸಿ, ಹಣ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ಲಕ್ಕುಂಡಿ, ಫಕ್ಕಿರೇಶ ರಟ್ಟಿಹಳ್ಳಿ, ಸೋಮು ಗುಡಿ, ಜಾನು ಲಮಾಣಿ, ಸಂತೋಷ ಕೋಡಕರ್, ಸತೀಶ ಕುಂಬಾರ, ಶಿವು ಲಮಾಣಿ, ರಾಮಣ್ಣ ಕಂಬಳಿ ಇತರರು ಇದ್ದರು.
ರಿತ್ತಿ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ 12 ದಿನಗಳಿಂದ ಧರಣಿ ನಡೆಸಲಾಗುತ್ತಿದೆ. ಆದರೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನಮ್ಮ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಸಾರ್ವಜನಿಕರು ಈ ಹೋರಾಟವನ್ನು ಬೆಂಬಲಿಸಬೇಕು ಎಂದು ರಾಜು ಖಾನಪ್ಪನವರ ಮನವಿ ಮಾಡಿದರು.



