ಬೆಂಗಳೂರು:- ಮೀನು ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರಿನಲ್ಲಿ ಮೀನಿನ ಬೆಲೆಯಲ್ಲಿ ಶೇಕಡಾ 30 ರಷ್ಟು ಏರಿಕೆಯಾಗಿದೆ. ಚಿಕನ್, ಮಟನ್ ಬಿಟ್ಟು ಮೀನು ತಿನ್ನುವವರಿಗೂ ಇದೀಗ ದರ ಏರಿಕೆಯ ಶಾಕ್ ತಟ್ಟಿದೆ.
ಹಕ್ಕಿ ಜ್ವರದ ಕಾರಣ ಕೋಳಿ ಮಾಂಸ ಸಿಗುತ್ತಿಲ್ಲ. ಸಿಕ್ಕಿದರೂ ಅನೇಕರು ರೋಗ ಭೀತಿಯಿಂದ ಅದನ್ನು ಖರೀದಿ ಮಾಡುತ್ತಿಲ್ಲ. ಮತ್ತೊಂದೆಡೆ, ಮಟನ್ ದುಬಾರಿಯಾಗಿದೆ. ಈ ಎಲ್ಲ ಕಾರಣಗಳಿಂದ ಮೀನಿನ ಬೇಡಿಕೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಮೀನು ಬೆಲೆ ಕೂಡ ದುಬಾರಿಯಾಗಿದೆ.
ನಗರದ ರಸೆಲ್ ಮಾರುಕಟ್ಟೆಗೆ ಬೇಡಿಕೆಯಷ್ಟು ಮೀನು ಬರುತ್ತಿಲ್ಲ. ಮಂಗಳೂರು, ಚೆನ್ನೈ, ಕೇರಳ, ಆಂಧ್ರಪ್ರದೇಶಗಳಿಂದ ಪೂರೈಕೆಯಲ್ಲಿ ಕುಂಠಿತವಾಗಿದೆ. ಬೇಸಿಗೆ ಹೆಚ್ಚಾಗಿರುವ ಹಿನ್ನೆಲೆ ಮೀನುಗಾರಿಕೆ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಕರಾವಳಿಯಲ್ಲಿ ಉಷ್ಣಾಂಶದ ಏರಿಕೆಯಾಗಿರುವುದು ಕೂಡ ಮೀನುಗಾರಿಕೆ ಮೇಲೆ ಗಂಭೀರ ನಕಾರಾತ್ಮಕ ಪರಿಣಾಮ ಬೀರಿದೆ ಎನ್ನಲಾಗಿದೆ. ಸಮುದ್ರದ ತಾಪಮಾನ ಹೆಚ್ಚಳದಿಂದಾಗಿ ಮೀನುಗಳು ಮೇಲ್ಮೈಗೆ ಬರುವುದನ್ನು ಕಡಿಮೆ ಮಾಡಿವೆ. ತಂಪಾದ ವಾತಾವರಣ ಅರಸಿ ಸಮುದ್ರದ ಆಳಕ್ಕೆ ವಲಸೆ ಹೋಗುತ್ತಿವೆ ಎನ್ನಲಾಗಿದೆ. ಮೀನುಗಳು ಸಮುದ್ರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವಾಗ ಮೀನುಗಾರರ ಬಲೆಗೆ ಸುಲಭವಾಗಿ ಬೀಳುತ್ತವೆ. ಆದರೆ ಯಾವಾಗ ಅವುಗಳು ಸಮುದ್ರದಾಳದಲ್ಲಿ ಆಶ್ರಯ ಪಡೆಯುತ್ತವೆಯೋ ಅಂತಹ ಸಂದರ್ಭದಲ್ಲಿ ಮೀನುಗಾರರ ಬಲೆಗೆ ಸಿಗುವುದಿಲ್ಲ. ಇದರ ಪರಿಣಾಮವಾಗಿ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ.