‘ಧುರಂಧರ್’ ಸಿನಿಮಾದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ಬಾಲಿವುಡ್ ನಟ ಅಕ್ಷಯ್ ಖನ್ನಾ ಅವರ ಡಿಮ್ಯಾಂಡ್ ಏಕಾಏಕಿ ಜಾಸ್ತಿಯಾಗಿದೆ. 2–3 ಕೋಟಿ ಸಂಭಾವನೆ ಪಡೆಯುತ್ತಿದ್ದ ನಟ, ಈಗ 20 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.
ಈ ಬೆಳವಣಿಗೆ ‘ದೃಶ್ಯಂ 3’ ಸಿನಿಮಾ ತಂಡಕ್ಕೆ ಶಾಕ್ ನೀಡಿದ್ದು, ಕೊನೆಗೆ ಅಕ್ಷಯ್ ಖನ್ನಾ ಅವರನ್ನು ಸಿನಿಮಾದಿಂದ ಕೈಬಿಡುವ ತೀರ್ಮಾನ ಕೈಗೊಳ್ಳಲಾಗಿದೆ. ಅವರ ಸ್ಥಾನಕ್ಕೆ ನಟ ಜೈದೀಪ್ ಅಹಲಾವತ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್, ‘ದೃಶ್ಯಂ ದೊಡ್ಡ ಬ್ರ್ಯಾಂಡ್. ಒಬ್ಬ ನಟ ಇದ್ದರೂ ಇಲ್ಲದಿದ್ದರೂ ಸಿನಿಮಾ ನಿಲ್ಲುವುದಿಲ್ಲ. ಅಕ್ಷಯ್ ಖನ್ನಾ ಬದಲಿಗೆ ಜೈದೀಪ್ ಬಂದಿದ್ದಾರೆ. ಅವರು ಉತ್ತಮ ನಟ ಮಾತ್ರವಲ್ಲ, ಉತ್ತಮ ವ್ಯಕ್ತಿಯೂ ಹೌದು’ ಎಂದು ಹೇಳಿದ್ದಾರೆ.
‘ಧುರಂಧರ್’ ಸಿನಿಮಾದಲ್ಲಿ ರೆಹಮಾನ್ ಡಕಾಯಿತ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಭಾರೀ ಮೆಚ್ಚುಗೆ ಪಡೆದಿದ್ದರು. ಇದೇ ಯಶಸ್ಸು ಅವರನ್ನು ದುಬಾರಿ ಸಂಭಾವನೆ ಕೇಳುವ ಮಟ್ಟಕ್ಕೆ ತಲುಪಿಸಿದೆ ಎನ್ನಲಾಗಿದೆ.
ಇನ್ನೊಂದು ಪ್ರಮುಖ ವಿಚಾರವೆಂದರೆ, ಅಕ್ಷಯ್ ಖನ್ನಾ ತಮ್ಮ ಲುಕ್ ಬದಲಾವಣೆಗೂ ಒತ್ತಾಯಿಸಿದ್ದಾರೆ. ಆದರೆ ‘ದೃಶ್ಯಂ 2’ನಲ್ಲಿ ಇದ್ದ ಪಾತ್ರದ ಕಂಟಿನ್ಯೂಟಿ ಹಾಳಾಗುತ್ತದೆ ಎಂಬ ಕಾರಣಕ್ಕೆ ನಿರ್ದೇಶಕರು ಇದನ್ನು ತಿರಸ್ಕರಿಸಿದ್ದಾರೆ. ಈ ವಿಚಾರವೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
‘ಪಾತಾಳ್ ಲೋಕ್’ ಮೂಲಕ ಜನಮನ ಗೆದ್ದ ಜೈದೀಪ್ ಅಹಲಾವತ್ ಈಗ ‘ದೃಶ್ಯಂ 3’ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಬದಲಾವಣೆ ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಈ ವಿಷಯದ ಬಗ್ಗೆ ಅಕ್ಷಯ್ ಖನ್ನಾ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ.



