ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸರ್ಕಾರ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಲಕ್ಷ್ಮೇಶ್ವರ ತಾಲೂಕಾ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ಕಲ್ಲೂರ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಲಕ್ಷ್ಮೇಶ್ವರ ತಾಲೂಕಾ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಅವರ ನೇತೃತ್ವದಲ್ಲಿ ಶನಿವಾರ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರ ರಾಜ್ಯ ಸರ್ಕಾರಿ ಶಾಲೆಗಳ ನೌಕರರಿಗೆ ಒಂದು ನೀತಿ, ಅನುದಾನಿತ ಶಾಲಾ ನೌಕರರಿಗೆ ಒಂದು ನೀತಿ ಮಾಡುತ್ತಾ ಗೊಂದಲ ಸೃಷ್ಟಿಸುತ್ತಿದೆ. 2006ರಲ್ಲಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನೇಮಕಾತಿ ಆದವರಿಗೆ ವಯೋ ನಿವೃತ್ತಿ ನಂತರ ಸರ್ಕಾರರಿಂದ ಸಿಗಬೇಕಾದ ಸೌಲಭ್ಯಗಳು ಸಿಗದೆ ಬೀದಿಗೆ ಬೀಳಬೇಕಾದ ಪರಿಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಇದಕ್ಕೆ ಅವಕಾಶ ನೀಡದೆ ಸಮಾನ ದುಡಿಮೆ-ಸಮಾನ ವೇತನದ ಅಡಿಯಲ್ಲಿ ಎಲ್ಲ ನೌಕರರ ವರ್ಗದವರನ್ನು ಕಾಣಬೇಕು ಮತ್ತು ಅನುದಾನಿತ ಶಾಲಾ ನೌಕರರಿಗೆ ಪಿಂಚಣಿ ಸೌಲಭ್ಯ ಮುಂದುವರೆಸಬೇಕು. ಓಪಿಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರಕಾರಿ ನೌಕರಿಗೆ ನೀಡುತ್ತರುವಂತೆ ಎನ್‌ಪಿಎಸ್ ಯಥಾವತ್ತಾಗಿ ಜಾರಿ ಮಾಡುವುದು ನೇಮಕಾತಿ ಪ್ರಾಧಿಕಾರದ ವಂತಿಕೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರಕಾರವು ಭರಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.
ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ.ಜಿ. ಲಿಂಗಶೆಟ್ಟಿ, ಕಾರ್ಯದರ್ಶಿ ಡಿ.ಎನ್. ಖರಾಟೆ, ಎಸ್.ವಿ. ಪಾಟೀಲ್, ಎಸ್.ಎಂ. ಹಾದಿಮನಿ, ಕೆ ರವಿ, ಟಿ.ಎಸ್. ಪೂಜಾರ, ಎ.ಬಿ. ಹೂಗಾರ, ವಿ.ಬಿ. ಯಲ್ಲಾಪುರ, ಎಸ್.ಎಸ್. ಮಠದ, ಎಸ್.ಜೆ. ಪವಾರ, ಸಿ.ಎಂ. ಕಿಳ್ಳಿ, ಪಿ.ಎಲ್. ಪಾಟೀಲ, ಎಸ್.ಬಿ. ಬೆಟಗೇರಿ, ಎಂ.ಎಸ್. ಭೀರನೂರ, ಆರ್.ಸಿ. ಉಮಚಗಿ, ವಿ.ಸಿ. ಬೆಂಡಿಗೇರಿ ಮುಂತಾದವರಿದ್ದರು.