HomeGadag Newsಬೆಳಗಾವಿ ಅಧಿವೇಶನದೊಳಗಾಗಿ ಬೇಡಿಕೆ ಈಡೇರಲಿ: ಡಾ. ಹನುಮಂತಗೌಡ ಕಲ್ಮನಿ

ಬೆಳಗಾವಿ ಅಧಿವೇಶನದೊಳಗಾಗಿ ಬೇಡಿಕೆ ಈಡೇರಲಿ: ಡಾ. ಹನುಮಂತಗೌಡ ಕಲ್ಮನಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರ ಸಂಘಟನೆ ಸೋಮವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ. ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಸರಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದ್ದು, ಇದೀಗ ಸೇವಾನುಭವ ಇರುವವರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ತೋಂಟದಾರ್ಯಮಠದ ಡಾ. ಶ್ರೀ ತೋಂಟದ ಸಿದ್ದರಾಮ ಶ್ರೀಗಳು ಮಾತನಾಡಿ, ವಿದ್ಯಾರ್ಥಿಗಳ ಬಾಳು ಬೆಳಗಬೇಕಾದವರ ಬದುಕೇ ಕತ್ತಲೆಯ ಕೂಪಕ್ಕೆ ಬಿದ್ದಂತಾಗಿದೆ. ಮಾನವೀಯತೆಗಿಂತ ದೊಡ್ಡದು ಬೇರೇನಿಲ್ಲ. ಇದುವರೆಗೂ ಕಡಿಮೆ ಗೌರವಧನಕ್ಕೆ ಸೇವೆ ಸಲ್ಲಿಸಿದವರ ಬದುಕು ಹಸನುಗೊಳಿಸುವ ಹೊಣೆಗಾರಿಕೆ ಸರಕಾರದ್ದು. ಈ ನಿಟ್ಟಿನಲ್ಲಿ ಪ್ರತಿಭಟನಾನಿರತರಿಗೆ ನ್ಯಾಯ ದೊರಕಲಿ ಎಂದು ಶ್ರೀಗಳು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಹಲವು ವರ್ಷಗಳಿಂದ ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಪಾಠ ಮಾಡುತ್ತಾ ಬಂದಿರುವ ಉಪನ್ಯಾಸಕ ಬಂಧುಗಳ ಕುಟುಂಬ ಬೀದಿಗೆ ಬೀಳುವಂತಾಗಿದೆ. ಈ ಪರಿಸ್ಥಿತಿಗೆ ಉನ್ನತ ಶಿಕ್ಷಣ ಇಲಾಖೆಯೇ ಹೊಣೆ. ಪರಿಷ್ಕೃತ ಮೆರುಪಟ್ಟಿಯಿಂದಾಗಿ ಸೇವಾನುಭವ ಇರುವವರು ಕೆಲಸ ಕಳೆದುಕೊಳ್ಳುವಂತಾಗಿದೆ. ವಿಕಲಚೇತನರಿಗೆ ಹೆಚ್ಚುವರಿ 10 ಅಂಕಗಳನ್ನು ಪರಿಗಣಿಸುವ ಮೂಲಕ ಆದ್ಯತೆ ನೀಡಲಾಗಿದೆ. ಮೆರುಪಟ್ಟಿ ಅಂಕಗಳನ್ನು ಆಧರಿಸಿರಬೇಕೇ ಹೊರತು ಉಳಿದ ವಿಷಯಗಳನ್ನಲ್ಲ. ಕೂಡಲೇ ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಸಚಿವರೊಂದಿಗೆ ಸಮಾಲೋಚಿಸಿ, ಅನ್ಯಾಯ ತಡೆಗೆ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಕಲ್ಮನಿ ಮಾತನಾಡಿ, ಅತಿಥಿ ಉಪನ್ಯಾಸಕರಲ್ಲಿ ಕ್ವಾಲಿಫೈಡ್, ನಾನ್‌ಕ್ವಾಲಿಫೈಡ್ ಎಂಬ ಬೇಧ ತರದೇ ಸೇವಾನುಭವ ಇರುವವರನ್ನೂ ಒಳಗೊಂಡಂತೆ ಮೊದಲಿನ ಪ್ರಕಾರ ಕೌನ್ಸೆಲಿಂಗ್ ನಡೆಯಲಿ. ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ/ಸೇವಾ ವಿಲೀನತೆ ನೀಡಲಿ. ಇದಕ್ಕಾಗಿ ಗದಗನಲ್ಲಿ ಹೋರಾಟ ಆರಂಭವಾಗಿದೆ. ಅಧಿವೇಶನದೊಳಗಾಗಿ ಬೇಡಿಕೆ ಈಡೇರಬೇಕು. ಇಲ್ಲದಿದ್ದರೆ ಬೆಳಗಾವಿ ಅಧಿವೇಶನದ ವೇಳೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ. ಕಾನೂನು ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಗೊಳಿಸುವ ವಿಶ್ವಾಸವಿದೆ ಎಂದರು.

ಪ್ರತಿಭಟನೆಯಲ್ಲಿ ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ಬುಧವಾರದಿಂದ ತರಗತಿ ಬಹಿಷ್ಕರಿಸಿ, ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಕರೆ ನೀಡಲಾಯಿತು.

ದೂರದ ಜಿಲ್ಲೆಗಳಿಂದ ಪ್ರತಿಭಟನೆಗೆ ಆಗಮಿಸಿದ್ದ ಮಹಿಳಾ ಅತಿಥಿ ಉಪನ್ಯಾಸಕರಲ್ಲಿ ಕೆಲವರು ಅಸ್ವಸ್ಥತೆಯಿಂದ ಬಳಲಿದರು. ನೀರು ಕುಡಿಸಿ ಪ್ರತಿಭಟನಾಕಾರರು ಅಸ್ವಸ್ಥರ ಆರೈಕೆ ಮಾಡಿದರು. ಸಂಜೆಯ ಬಳಿಕ ತೋಂಟದಾರ್ಯ ಮಠದ ಕೊಠಡಿಗಳಲ್ಲಿ ಅವರಿಗೆ ವಸತಿ–ಊಟೋಪಚಾರದ ವ್ಯವಸ್ಥೆ ಮಾಡಲಾಯಿತು. ಪ್ರತಿಭಟನೆ ವೇಳೆ ಅಸಹಾಯಕ ಸ್ಥಿತಿಗೆ ಬೇಸತ್ತು ಅತಿಥಿ ಉಪನ್ಯಾಸಕರೊಬ್ಬರು ಪೆಟ್ರೋಲ್ ಸುರಿದುಕೊಳ್ಳಲು ಯತ್ನಿಸಿ, “ನಮಗಿರುವ ದಾರಿ ಆತ್ಮಹತ್ಯೆಯೊಂದೇ” ಎಂದು ಆಕ್ರೋಶ ವ್ಯಕ್ತಪಡಿಸಿದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!