ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ಕಾರ ತಡವಾಗಿಯಾದರೂ ಗೋವಿನಜೋಳದ ಬೆಂಬಲ ಬೆಲೆ ಕೇಂದ್ರ ಪ್ರಾರಂಭಿಸಿರುವುದು ಸ್ವಾಗತಾರ್ಹವಾಗಿದ್ದು, ಪ್ರತಿ ರೈತರಿಗೆ ನಿಗದಿ ಮಾಡಿರುವ 20 ಕ್ವಿಂಟಲ್ ಪ್ರಮಾಣ ಬದಲಾಗಿ 100 ಕ್ವಿಂಟಲ್‌ಗೆ ಹೆಚ್ಚಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ ಆಗ್ರಹಿಸಿದರು.
ಅವರು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಕ್ಕೆ ಕಾರಣರಾದ ರೈತ ಹೋರಾಟಗಾರರಿಗೆ ಪಕ್ಷದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಈ ವರ್ಷ ನಮ್ಮ ಭಾಗದಲ್ಲಿ ಬಹುತೇಕ ರೈತರು ಹೆಚ್ಚಿನ ಕ್ಷೇತ್ರದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಮುಂಗಾರಿನ ಕಾಳು, ಉಳ್ಳುಗಡ್ಡಿ, ಶೇಂಗಾ ಬೆಳೆಗೆಲ್ಲ ಹಾಳಾಗಿ ಈ ಬೆಳೆಯೊಂದೇ ರೈತರಿಗೆ ಆಸರೆಯಾಗಿದೆ. ಹೆಚ್ಚಿನ ಪ್ರಮಾಣದ ಮೆಕ್ಕೆಜೋಳ ಖರೀದಿಸಬೇಕು. ರೈತರಿಗೆ ಯಾವುದೇ ತೊಂದರೆಯಾಗದಂ್ತೆ ಖರೀದಿ ಪ್ರಕ್ರಿಯೆ ಕೈಗೊಳ್ಳಬೇಕು. ಖರೀದಿ ಪ್ರಕ್ರಿಯೆ ನಂತರ ಡಿಬಿಟಿ ಮೂಲಕ ಅವರ ಹಣ ಖಾತೆಗಳಿಗೆ ಜಮಾ ಮಾಡಬೇಕು. ಬ್ಯಾಂಕುಗಳು ಜಮೆಯಾದ ಹಣವನ್ನು ಯಾವುದೇ ಕಾರಣಕ್ಕೂ ರೈತರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕಿನವರಿಗೆ ನಿರ್ದೇಶನ ನೀಡಬೇಕು. ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ ರೈತರಿಗೆ ಅವರ ಮಹಸೀಲು ತೆಗೆದುಕೊಂಡು ಬರಲು ನಿಗದಿತ ದಿನವನ್ನು ಮೊದಲೇ ಹೇಳಿದರೆ ಒಂದೇ ದಿನಕ್ಕೆ ಹೆಚ್ಚು ರೈತರು ಸೇರಿ ಗದ್ದಲವಾಗುವುದು ತಪ್ಪುತ್ತದೆ. ವೇಬ್ರಿಡ್ಜ್ ಮೂಲಕ ತೂಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಸೋಮೇಶ ಉಪನಾಳ, ರೈತ ಮುಖಂಡ ಬಸವರಾಜ ಪಲ್ಲೇದ, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಚನ್ನವೀರಪ್ಪ ಹೂಗಾರ, ಅಶೋಕ ಸೂರಣಗಿ, ನಿಂಗಪ್ಪ ಬನ್ನಿ, ಅನಿಲ ಮುಳಗುಂದ, ಗಂಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ, ಸಂತೋಷ ಜಾವೂರ, ಮಂಜುನಾಥ ಗಜಾಕೋಶ, ಬಸವರಾಜ ಕಲ್ಲೂರ, ಜಾಹೀರ್ ಮೋಮಿನ್ ಹಲವರಿದ್ದರು.



