ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕದಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಇತ್ತೀಚೆಗೆ ಭೇಟಿ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿಯವರು ಮೊದಲನೇ ಬಾರಿಗೆ ಪ್ರಭಾರಿ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಸಹ ಶಿಕ್ಷಕರಿಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಸಮರ್ಪಕವಾಗಿ ಸೂಕ್ತ ದಾಖಲೆಗಳೊಂದಿಗೆ ಉತ್ತರಿಸಿದ್ದಾರೆ. ಆದರೂ ಕೆಲವು ಶಿಕ್ಷಕರಿಗೆ ಮಾತ್ರ ಆಯುಕ್ತರು ಅಮಾನತ್ತು ಆದೇಶದ ಅಸ್ತ್ರವನ್ನು ಪ್ರಯೋಗಿಸಿದ್ದಾರೆ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್.ಕಲ್ಮನಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಮಾನತ್ತುಗೊಂಡಿರುವ ಶಿಕ್ಷಕರು ತಾವು ನಿರ್ವಹಿಸಿದ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಜಿಪಿಎಸ್ ಪೋಟೋ ಸಮೇತ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿದ್ದಾರೆ. ಆದರೂ ಮಾನ್ಯ ಆಯುಕ್ತರು ಸಮರ್ಪಕವಾಗಿ ಪರಿಶೀಲಿಸದೆ ಪ್ರಾಮಾಣಿಕ ಶಿಕ್ಷಕರ ಮೇಲೆ ಅಮಾನತ್ತು ಅಸ್ತಿತ್ವವನ್ನು ಪ್ರಯೋಗಿಸಿದ್ದು ಶಿಕ್ಷಕರ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ತಕ್ಷಣ ಈ ಅಮಾನತ್ತು ಆದೇಶವನ್ನು ರದ್ದುಪಡಿಸಿ ಸದರಿ ಶಿಕ್ಷಕರನ್ನು ಅದೇ ಶಾಲೆಯಲ್ಲಿ ಸೇವೆಯಲ್ಲಿ ಮುಂದುವರೆಸಬೇಕು ಎಂದು ಪಿ.ಕೆ. ಚಲವಾದಿ, ಬಿ.ಬಿ. ಹಿರೇಮಠ. ಕೆ.ಟಿ. ಮುಲ್ಲಾ, ಎಂ.ಜಿ. ಮಾದರ, ಬಿ.ಸಿ. ಪಾಟೀಲ. ಎಂ.ಮಮತಾ, ಪಿ.ಕೆ. ಲತಾ ಸೇರಿದಂತೆ ಹಲವಾರು ಶಿಕ್ಷಕರು ಮತ್ತು ಉಪನ್ಯಾಸಕರು ಆಯುಕ್ತರನ್ನು ಆಗ್ರಹಿಸಿದ್ದಾರೆ.


