ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಮತ್ತು ತಾಲೂಕಾಧ್ಯಕ್ಷ ಲೋಕೇಶ ಸುತಾರ ಮಾತನಾಡಿ, ಕರವೇ ಹೋರಾಟದ ಫಲವಾಗಿ ರಾಜ್ಯ ಸರಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸಿದೆ. ಇದರನ್ವಯ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೂ ಕನ್ನಡದ ನಾಮಫಲಕ ಶೇ.60ರಷ್ಟು ಭಾಗ ಇರಬೇಕು. ಈ ಬಗ್ಗೆ ತಾಲೂಕಾಡಳಿತ ಕಟ್ಟನಿಟ್ಟಿನ ಕ್ರಮ ಕೈಗೊಳ್ಳಬೇಕು.
ಇಲ್ಲವಾದಲ್ಲಿ ನಮ್ಮ ವೇದಿಕೆಯವರು ಖುದ್ದಾಗಿ ಬೀದಿಗಿಳಿದು, ಅನ್ಯಭಾಷಾ ನಾಮಫಲಕಗಳನ್ನು ತೆರವುಗೊಳಿಸಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮನವಿ ಸ್ವೀಕರಿಸಿ, 7 ದಿನಗಳೊಳಗೆ ಎಲ್ಲ ವ್ಯಾಪಾರಸ್ಥರು ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಕಬೇಕು ಈ ನಿಟ್ಟಿನಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ತಾಲೂಕಾ ಪದಾಧಿಕಾರಿಗಳಾದ ಪ್ರಕಾಶ ಕೊಂಚಿಗೇರಿಮಠ, ಪ್ರವೀಣ ಗೌರಿ, ಚನ್ನಬಸಯ್ಯ ಗಡ್ಡದೇವರಮಠ, ಬಸವರಾಜ ರಗಟಿ, ಗಣೇಶ ಮೆಹರವಾಡೆ, ಪ್ರಕಾಶ ಹುಡೇದ, ಪ್ರವೀಣ ಕುರಿ, ಕೈಸರ್ ಮಹ್ಮದಅಲಿ, ಗಂಗಾಧರ ಕೊಂಚಿಗೇರಿಮಠ, ಬಸನಗೌಡ ಪಾಟೀಲ, ಮುತ್ತು ಕರ್ಜೆಕಣ್ಣವರ, ಗಂಗಾಧರ, ಕುಮಾರ ಕಣಗಿ, ಆದೇಶ ಸವಣೂರ, ಷಣ್ಮುಖಪ್ಪ, ಮಲ್ಲೇಶಪ್ಪ ಜಬಡಿ, ಚಂದ್ರು ನೀರಲಗಿ, ಗುಡ್ಡೆನಪ್ಪ ಸೊಪ್ಪಿನ, ಬಸವರಾಜ ಮಲ್ಲೂರ ಮುಂತಾದವರಿದ್ದರು.