ವಿಜಯಸಾಕ್ಷಿ ಸುದ್ದಿ, ಗದಗ: ನಗರದ ರೈಲ್ವೆ ನಿಲ್ದಾಣಕ್ಕೆ ಪಂಡಿತ ಪುಟ್ಟರಾಜರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿ ಗದಗದಿಂದ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯಾದ್ಯಂತ ಈ ಹೋರಾಟ ನಡೆಯಲಿದೆ. ಪುಟ್ಟರಾಜರ ಹೆಸರಿಡುವಂತೆ ನಾವು ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸಚಿವ ಎಚ್.ಕೆ. ಪಾಟೀಲರು ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕರಿ ರಮೇಶ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದ್ವಿಭಾಷಾ ನೀತಿ ಅನುಸರಿಸಿದೆ. ಇದನ್ನು ಬಿಟ್ಟು ತಮಿಳುನಾಡು ಮಾದರಿಯಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತರಬೇಕು. ಕನ್ನಡಿಗರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವ ಕೆಲಸವನ್ನು ಬೇರೆ ರಾಜ್ಯದವರು ಮಾಡುತ್ತಿದ್ದಾರೆ. ಇದಕ್ಕೆ ಕಠಿಣವಾಗಿ ಹಾಕಬೇಕು. ತಮಿಳುನಾಡು, ಮಹಾರಾಷ್ಟ್ರ, ಕೇರಳದಲ್ಲಿ ಸ್ಥಳೀಯ ಭಾಷೆ ಮಾತನಾಡದಿದ್ದರೆ ಅಲ್ಲಿ ಜಾಗ ನೀಡುವುದಿಲ್ಲ. ಆದರೆ, ಬೆಳಗಾವಿ ಸೇರಿ ಹಲವು ಭಾಗಗಳಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಕೈಕಟ್ಟಿ ಕುಳಿತಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಭಾರತದ ಕಾರ್ಖಾನೆಗಳು ರಾಜ್ಯದಲ್ಲಿ ದರ್ಬಾರ್ ನಡೆಸುತ್ತಿವೆ. ಅಲ್ಲಿ ಕನ್ನಡಿಗರಿಗೆ ಅವಕಾಶ ನೀಡುತ್ತಿಲ್ಲ. ಗ್ರೇಟರ್ ಬೆಂಗಳೂರು ಬದಲಾಗಿ ಗ್ರೇಟರ್ ಉತ್ತರ ಕರ್ನಾಟಕ ಮಾಡಿ ಎಂದು ಬೇಕರಿ ರಮೇಶ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಅಷ್ಪಾಕಲಿ ಹ. ಹೊಸಳ್ಳಿ, ಗದಗ ಜಿಲ್ಲಾಧ್ಯಕ್ಷ ಮಂಜುನಾಥ ಗುಡದೂರ, ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಆರಾಧನಾ ಜಿ. ಬಣಕಾರ, ರಾಜ್ಯ ಉಪಾಧ್ಯಕ್ಷ ಎನ್.ಸಿ. ಕಾಂಬಳೆ, ಕಾರ್ಯದರ್ಶಿ ವಿನಾಯಕ ಸಂಡೂರ, ಪ್ರಮುಖರಾದ ಉಮೇಶ್ ರಾಂಪುರ, ಗವಿಶಿದ್ಧಯ್ಯ ಹಳ್ಳಿಕೇರಿ ಮಠ, ರಾಜೇಸಾಬ ಪಿಂಜಾರ್, ಲಕ್ಷ್ಮಣ್ ಹಾಗೂ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡದ ಪ್ರಥಮ ಸಾಮ್ರಾಜ್ಯ ಸ್ಥಾಪನೆ ಮಾಡಿದ ಕದಂಬ ಚಕ್ರವರ್ತಿ ಮಯೂರ ವರ್ಮ ಹಾಗೂ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದ ಮುಂದೆ ಮತ್ತು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಮಾಡಬೇಕು.
– ಎಂ.ಪಿ. ಮುಳಗುಂದ,
ರೈತ ಮುಖಂಡ.


