ವಿಜಯಸಾಕ್ಷಿ ಸುದ್ದಿ, ಗದಗ: ಲ್ಲಾದ್ಯಂತ ಈ ವರ್ಷ ಹಿಂಗಾರು ಮಳೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಆಗಿರುವುದರಿಂದ ರೈತರು ಕಡಲೆಯನ್ನು ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ. ಆದರೆ, ತರುವಾಯ ಮೋಡ ಕವಿದ ವಾತಾವರಣ ಹಾಗೂ ಸಿಡಿ ರೋಗಬಾಧೆ ಆವರಿಸಿ ಕಡಲೆ ಬೆಳೆ ಸಂಪೂರ್ಣ ನಾಶವಾಗಿದೆ.
ಈಗ ಅಳಿದುಳಿದ ಬೆಳೆ ಕಟಾವಿಗೆ ಬಂದಿದೆ. ಅದನ್ನು ರಾಶಿ ಮಾಡಿಕೊಂಡು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರಿಗೆ ಬಿತ್ತನೆಯಿಂದ ಹಿಡಿದು ರಾಶಿ ಮಾಡುವವರೆಗೆ 4 ಎಕರೆ ಜಮೀನಿನಲ್ಲಿ ಬೆಳೆ ತೆಗೆಯಬೇಕಾದರೆ ಸುಮಾರು 15ರಿಂದ 20 ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಆದರೆ, ಖರ್ಚು ಮಾಡಿದಷ್ಟು ಬೆಳೆ ಬರುತ್ತಿಲ್ಲ.
ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆದ ಕಡಲೆಯನ್ನು ರೈತರು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 2 ಸಾವಿರದಿಂದ ಗರಿಷ್ಠ 6183 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಿ ಕನಿಷ್ಠ 10500 ರೂಪಾಯಿಗೆ ಕಡಲೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಆರ್. ನಾರಾಯಣರೆಡ್ಡಿ ಬಣದ ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ, ಗಿರೀಶ್ ಗುಡ್ಲಾನೂರ, ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ, ರಾಮಣ್ಣ ಖಂಡ್ರಿ, ರಾಮಣ್ಣ ಡಂಬಳ ಮುಂತಾದ ರೈತ ಮುಖಂಡರು ಆಗ್ರಹಿಸಿದ್ದಾರೆ.