ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬಡ್ಡಿಗೆ ಹಣ ನೀಡಿದವರ ಕಾಟಕ್ಕೆ ಬೇಸತ್ತು ಪಟ್ಟಣದ ಅನೇಕ ಯುವಕರು ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕಾರಿ ಸಂಗತಿ. ಇದನ್ನು ತಡೆಯಲು ಎಲ್ಲರೂ ಒಮ್ಮನಸ್ಸಿನಿಂದ ಶ್ರಮಿಸಬೇಕು. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರವೂ ಬೇಕೆಂದು ನರೇಗಲ್ಲ ಪಟ್ಟಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ ಹೇಳಿದರು.
ನರೇಗಲ್ ಪಟ್ಟಣ ಅಭಿವೃದ್ಧಿ ಸಮಿತಿಯಿಂದ ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಊರಿನಲ್ಲಿ ಹೆಚ್ಚುತ್ತಿರುವ ತರುಣರ ಆತ್ಮಹತ್ಯೆ ಪ್ರಕರಣ, ಕುಟುಂಬ ವ್ಯವಸ್ಥೆ, ದುಡಿಯುವ ಸಂಸ್ಕೃತಿಯ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಬಡ್ಡಿ ವ್ಯವಹಾರದ ಕಿರುಕುಳದಿಂದಾಗಿ 35 ವಯಸ್ಸಿನ ಒಳಗಿನ ಅಂದಾಜು ೩೦-೩೫ ಯುವಕರು ಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗಳ ಬಗ್ಗೆ ಎಲ್ಲಿಯೂ ಪ್ರಕರಣಗಳು ದಾಖಲಾಗಿಲ್ಲ. ಅಗತ್ಯಕ್ಕಾಗಿ ಹಣ ಪಡೆಯುವ ಯುವಕರ ಮೇಲೆ ಅತಿರೇಕದ ಒತ್ತಡ ಹಾಕಿ ದೈಹಿಕ ಹಾಗೂ ಮಾನಸಿಕ ಹಲ್ಲೆಗಳನ್ನು ಮಾಡುತ್ತಾರೆ. ಮನೆವರೆಗೆ ಬಂದು ಭಯ ಹುಟ್ಟಿಸುತ್ತಾರೆ. ಕೆಲವೊಮ್ಮೆ ಮನೆಯ ಮಹಿಳೆಯರ ಮೇಲೆಯೂ ಬೆದರಿಕೆ ಹಾಕುತ್ತಾರೆ. ಹೀಗಾಗಿ ಮರ್ಯಾದೆಗೆ ಹೆದರಿ ತರುಣರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ.
ಹಣ ನೀಡಿದ ಬಲಾಢ್ಯರ ವಿರುದ್ಧ ಹೋರಾಡಲಾಗದೆ ಪೊಲೀಸ್ ಸ್ಟೇಷನ್‌ನಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿಲ್ಲ. ಹೀಗಾಗಿ ನರೇಗಲ್‌ನಲ್ಲಿ ಸಂಭವಿಸುತ್ತಿರುವ ಆತ್ಮಹತ್ಯೆಗಳು ಮುಚ್ಚಿ ಹೋಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಎಲ್ಲಾ ಸಮಾಜದ ಹಿರಿಯರು ಸಮಿತಿಯ ಮೂಲಕ ಮುಂದಾಗಿದ್ದೇವೆ. ಈ ಕುರಿತು ತನಿಖೆ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಗುರುರಾಜ ಕುಲಕರ್ಣಿ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣ, ಧರ್ಮ-ಸಂಸ್ಕೃತಿಯ ತಿಳುವಳಿಕೆ ನೀಡಲು ಮುಂದಾಗಬೇಕು. ಅದಕ್ಕಾಗಿ ಪ್ರತಿ ಶಾಲೆ, ಓಣಿಗೆ ಹೋಗಿ ನೈತಿಕ ಮೌಲ್ಯಗಳನ್ನು ತುಂಬುವ ಕಾರ್ಯ ಮಾಡೋಣ ಎಂದರು.
ಶರಣಪ್ಪ ಧರ್ಮಾಯತ, ಚನ್ನಬಸಪ್ಪ ಕುಷ್ಟಗಿ, ಕಳಕನಗೌಡ ಪೊಲೀಸ್‌ಪಾಟೀಲ, ಮುತ್ತಣ್ಣ ಮಾವಿನಕಾಯಿ, ಎ.ಎ. ನವಲಗುಂದ, ಈರಪ್ಪ ಕಳಕೊಣ್ಣರ, ಕೆ.ಎಸ್. ಹಡಪದ, ಶಂಶುದ್ದೀನ ಕುಂದಗೋಳ, ಗಂಗಾಧರ ಬಡಿಗೇರ, ಶರಣಪ್ಪ ಬಡಿಗೇರ, ಕಲ್ಲಪ್ಪ ಗಂಗರಗೊಂಡ, ಚಂದ್ರು ಹೊನವಾಡ, ಎಸ್.ಎ. ಜಕ್ಕಲಿ, ದಾದುಸಾಬ್ ನದಾಫ್, ಸಿ.ವಿ. ವಂಕಲಕುಂಟಿ, ಮಲ್ಲಿಕಾರ್ಜುನ ಮಲ್ಲನಗೌಡ್ರ, ಬಾಳಪ್ಪ ಸೋಮಗೊಂಡ, ಸಂಗನಗೌಡ ಮಾಲಿಪಾಟೀಲ ಇದ್ದರು.
ರೈತ ಸಮೃದ್ಧಿ ಕೇಂದ್ರದ ಅಧ್ಯಕ್ಷ ಜಗದೀಶ ಸಂಕನಗೌಡ್ರ ಮಾತನಾಡಿ, ಸಮಿತಿಯವರು ಈಗಾಗಲೇ ಮಾನವ ಹಕ್ಕುಗಳ ನಿಯೋಗ, ಮಕ್ಕಳ ಹಕ್ಕುಗಳ ನಿಯೋಗದ ಅಧ್ಯಕ್ಷರ ಜೊತೆಯಲ್ಲಿ ಸಂಪರ್ಕದಲ್ಲಿದ್ದೇವೆ. ಅವರಿಗೆಲ್ಲಾ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದು, ಅವರು ನೀಡಿದ ಮಾರ್ಗದರ್ಶನದಂತೆ ಹೆಜ್ಜೆಇಡುತ್ತಿದ್ದೇವೆ ಎಂದರು.



