ಡೆಂಘೀ ಜ್ವರಕ್ಕೆ ತಿಳುವಳಿಕೆಯೇ ಮದ್ದು : ಜಿಲ್ಲಾಧಿಕಾರಿ ದಿವ್ಯ ಪ್ರಭು

0
Dengue awareness program held at Amminabhavi
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಡೆಂಘೀ ರೋಗದ ಆತಂಕ ಬೇಡ. ಅದರಲ್ಲೂ ಸಾರ್ವಜನಿಕರು ಒಗ್ಗಟ್ಟಾಗಿ ನಿಯಂತ್ರಣಕ್ಕೆ ಕೈ ಜೋಡಿಸಿದರೆ ಬಹುಬೇಗ ನಿಯಂತ್ರಣಕ್ಕೆ ಬರಲಿದೆ. ಬೆಳಿಗ್ಗೆ ಸಮಯದಲ್ಲಿಯೇ ಡೆಂಘೀ ರೋಗ ತರುವ ಸೊಳ್ಳೆ ಕಚ್ಚಲಿದ್ದು, ಜನರು ಎಚ್ಚರ ವಹಿಸಬೇಕು. ಜ್ವರ ಬಂದರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕು.

Advertisement

ಡೆಂಘೀ ಖಾಯಿಲೆ ಪ್ರತಿ ಮಳೆಗಾಲದಲ್ಲಿಯೂ ಅನೈರ್ಮಲ್ಯ ಸ್ಥಳಗಳಲ್ಲಿ, ಅನಗತ್ಯ ನೀರು ಸಂಗ್ರಹಣ ಸ್ಥಳಗಳಲ್ಲಿ ಕಾಣಿಸುತ್ತದೆ. ಡೆಂಘೀ ಖಾಯಿಲೆ ಬಗ್ಗೆ ಭಯ, ಆತಂಕ ಬೇಡ. ತಿಳುವಳಿಕೆ, ಮುಂಜಾಗೃತೆ ವಹಿಸುವುದೇ ಇದಕ್ಕೆ ಮದ್ದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಅವರು ಶುಕ್ರವಾರ ಬೆಳಿಗ್ಗೆ ಅಮ್ಮಿನಭಾವಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಸೊಳ್ಳೆ ನಿರ್ಮೂಲನಾ ದಿನಾಚರಣೆ ಹಾಗೂ ಡೆಂಘೀ ನಿಯಂತ್ರಣ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡೆಂಘೀ ನಿಯಂತ್ರಣ ಮತ್ತು ನಿರ್ಮೂಲನೆ ನಮ್ಮೆಲ್ಲರ ಕೈಯಲ್ಲಿದೆ. ನಮ್ಮ ಮನೆ ಹಾಗೂ ಮನೆ ಸುತ್ತಮುತ್ತ ನೀರು ಶೇಖರಣೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮನೆಯಲ್ಲಿ ಬಳಕೆಗೆ, ಕುಡಿಯಲು ಸಂಗ್ರಹಿಸುವ ನೀರಿನ ತೊಟ್ಟಿ ಹಾಗೂ ಸಂಗ್ರಹ ಪರಕರಗಳನ್ನು ಮುಚ್ಚಬೇಕು. ಇಷ್ಟು ಜಾಗೃತಿ ವಹಿಸಿದರೆ ಡೆಂಘೀ ಮುಕ್ತರಾಗುಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Dengue awareness program held at Amminabhavi

ಜ್ವರ ಬಂದ ತಕ್ಷಣ ನಿರ್ಲಕ್ಷ್ಯ ತೋರದೆ ಆಸ್ಪತ್ರೆಗೆ ತೋರಿಸಬೇಕು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಡೆಂಘೀ ಸೇರಿದಂತೆ ಎಲ್ಲ ಖಾಯಿಲೆಗಳಿಗೆ ರಕ್ತ ಪರೀಕ್ಷೆ, ಚಿಕಿತ್ಸೆ ಉಚಿತವಾಗಿದೆ. ಖಾಸಗಿ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಿಗೆ ಶುಲ್ಕ ರೂ. 300 ನಿಗದಿ ಮಾಡಿ ಸರಕಾರ ಆದೇಶಿಸಿದೆ. ಡೆಂಘೀ ರಕ್ತ ಪರೀಕ್ಷೆ ದರಗಳನ್ನು ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಲ್ಲಿ ಎದ್ದು ಕಾಣುವಂತೆ ಪ್ರಕಟಿಸಲು ಜಿಲ್ಲಾಡಳಿತ ನಿರ್ದೇಶಿಸಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮಿನಭಾವಿ ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ತಿದಿ ವಹಿಸಿ ಮಾತನಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಡಿ. ಚೆವರಡ್ಡಿ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ಸವಿತಾ ಅಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಮಂಜುನಾಥ ಸೊಪ್ಪಿಮಠ, ಅಮ್ಮಿನಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಾನಿಕ ವೈದ್ಯಾಧಿಕಾರಿ ಡಾ. ಬೀನಾ ಶೂರ್ಪಾಲಿ, ಅಮ್ಮಿನಭಾವಿ ಗ್ರಾಮ ಪಂಚಾಯತಿ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡೆಂಘೀ ಶಂಕಿತರ ಮತ್ತು ಪಾಸಿಟಿವ್ ಇರುವವರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ, ಕಿಮ್ಸ್ ಮತ್ತು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯತೆಗೆ ಅನುಗುಣವಾಗಿ ಡೆಂಘೀ ರೋಗಿಗಳಿಗಾಗಿ ಪ್ರತ್ಯೇಕ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಅಗತ್ಯ ಔಷಧಿ ಸಹ ಸಂಗ್ರಹ ಮಾಡಲಾಗಿದೆ. ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣದಲ್ಲಿದ್ದು, ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here