ನವದೆಹಲಿ: ದಟ್ಟವಾದ ಮಂಜು ಹಾಗೂ ಹೊಗೆಯ ಕಾರಣದಿಂದ ಕರ್ನಾಟಕದ 21 ಮಂದಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ದೆಹಲಿಯ ವಿಮಾನ ನಿಲ್ದಾಣದಲ್ಲೇ ಟೇಕಾಫ್ ಆಗದೆ ನಿಂತಿದೆ.
ಭಾನುವಾರ ಆಯೋಜಿಸಲಾಗಿದ್ದ ‘ವೋಟ್ ಚೋರಿ’ ಸಮಾವೇಶದಲ್ಲಿ ಭಾಗವಹಿಸಲು ಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು ದೆಹಲಿಗೆ ಆಗಮಿಸಿದ್ದರು. ಇಂದು ದಾವಣಗೆರೆಯಲ್ಲಿ ನಡೆಯಲಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಉದ್ದೇಶದಿಂದ ದೆಹಲಿಯಿಂದ ಬೆಳಗಾವಿಗೆ ತೆರಳಲು ವಿಮಾನ ಏರಿದ್ದರು.
ಶಾಸಕರನ್ನು ಹೊತ್ತ ವಿಮಾನ ಬೆಳಗ್ಗೆ 5:30ಕ್ಕೆ ದೆಹಲಿಯಿಂದ ಹೊರಡಬೇಕಿತ್ತು. ಆದರೆ ದಟ್ಟವಾದ ಮಂಜು ಹಾಗೂ ಹೊಗೆಯಿಂದಾಗಿ ವಿಮಾನ ಟೇಕಾಫ್ ಆಗಿಲ್ಲ. ಸುಮಾರು ನಾಲ್ಕು ಗಂಟೆಗಳ ಕಾಲ ಶಾಸಕರು ವಿಮಾನದ ಒಳಗಡೆಯೇ ಕುಳಿತುಕೊಳ್ಳುವಂತಾಗಿದೆ.
ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕಾಫ್ ಆಗಿಲ್ಲ. ವಿಮಾನ ಯಾವ ಸಮಯಕ್ಕೆ ಹೊರಡಲಿದೆ ಎಂಬ ಮಾಹಿತಿ ಸಿಬ್ಬಂದಿಯಿಂದಲೂ ಲಭ್ಯವಾಗಿಲ್ಲ. ದೆಹಲಿಯಲ್ಲಿ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಹಲವು ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಪ್ರಕ್ರಿಯೆ ವ್ಯತ್ಯಯಗೊಂಡಿದೆ.
ವಿಮಾನದಲ್ಲಿರುವ ಶಾಸಕರು ಮತ್ತು ಸಚಿವರು:
ಕೋನರೆಡ್ಡಿ, ಬಸನಗೌಡ ಬಾದರ್ಲಿ, ಆನಂದ್ ಗಡದೇವರಮಠ, ಹೆಚ್‌ಕೆ ಪಾಟೀಲ್, ಲಕ್ಷ್ಮೀ ಹೆಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ರಾಜು ಗೌಡ, ಸಲೀಂ ಅಹಮದ್, ತನ್ವೀರ್ ಸೇಠ್, ಸತೀಶ್ ಜಾರಕಿಹೊಳಿ, ಜಿ.ಎಸ್. ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಈಶ್ವರ್ ಖಂಡ್ರೆ, ಜೆ.ಟಿ. ಪಾಟೀಲ್, ತಿಪ್ಪಣ್ಣ ಕಾಮಕನೂರ್, ನಾಗೇಂದ್ರ, ಎಂ.ಬಿ. ಪಾಟೀಲ್, ಅಲ್ಲಮಪ್ರಭು, ರೆಹಮಾನ್ ಖಾನ್ ಹಾಗೂ ಕೆಜೆ ಜಾರ್ಜ್.



