ವಿಜಯಸಾಕ್ಷಿ ಸುದ್ದಿ, ಗದಗ : ನಗರದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಬೇಸಿಗೆ ಶಿಬಿರದ ಮಕ್ಕಳಿಗೆ ಗದುಗಿನ ಅಳ್ಳೊಳ್ಳಿ ಚಿಕ್ಕಮಕ್ಕಳ ದಂತ ಚಿಕಿತ್ಸಾಲಯದ ಖ್ಯಾತ ವೈದ್ಯ ಡಾ. ರೋಹಿತ್ ಕೊಪ್ಪಳಕರ್ ಆರೋಗ್ಯ ಸಲಹೆ ನೀಡಿದರು.
ಡಾ. ರೋಹಿತ್ ಕೊಪ್ಪಳಕರ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಪ್ರತಿಯೊಬ್ಬರೂ ಪ್ರತ್ಯೇಕ ಬ್ರಷ್‌ನಲ್ಲಿ ಹಲ್ಲುಜ್ಜುವ ಅಭ್ಯಾಸ ಇಟ್ಟುಕೊಳ್ಳಬೇಕು. ಯಾವುದೇ ಆಹಾರ-ಪದಾರ್ಥ ಸೇವಿಸಿದ ನಂತರ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲುಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು.
ಪ್ರತಿನಿತ್ಯ ಬೆಳಿಗ್ಗೆ ಮತ್ತು ರಾತ್ರಿ ತಪ್ಪದೇ ಬ್ರಷ್ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಹಲ್ಲಿನ ಮಾದರಿ ತೋರಿಸಿ, ಪ್ರಾಯೋಗಿಕವಾಗಿ ಹಲ್ಲು ಉಜ್ಜುವ ಪದ್ಧತಿಯನ್ನು ತಿಳಿಸಿಕೊಟ್ಟರು. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಮುದ್ದೆಯಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆ ಆಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಈ ಕಾರ್ಯಗಾರದಲ್ಲಿ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶಕ ಪ್ರತೀಕ ಎಸ್.ಹುಯಿಲಗೋಳ, ಶಾಲೆಯ ಮುಖ್ಯೋಪಾಧ್ಯಾಯ ಎಂ.ಆರ್. ಡೊಳ್ಳಿನ, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.