ಬೆಂಗಳೂರು:- ರಾಜಧಾನಿ ಬೆಂಗಳೂರಿನ ಚಂದಾಪುರದಲ್ಲಿ ಇತ್ತೀಚೆಗೆ ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಲೇಜಿನ 6 ಉಪನ್ಯಾಸಕರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಯಶಸ್ವಿನಿ ಆತ್ಮಹತ್ಯೆ ಬೆನ್ನಲ್ಲೇ ಕಾಲೇಜು ಅಧ್ಯಾಪಕರ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮತ್ತೊಂದೆಡೆ ಯಶಸ್ವಿನಿ ಸಾವಿಗೆ ನ್ಯಾಯಬೇಕೆಂದು ಸಹಪಾಠಿಗಳು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕೆಲಸದಿಂದ ಆರು ಉಪನ್ಯಾಸಕರನ್ನು ವಜಾ ಮಾಡಲಾಗಿದೆ.
ವಜಾಗೊಂಡ ಉಪನ್ಯಾಸಕರನ್ನು ಒಎಂಆರ್ ವಿಭಾಗದ ಲೆಕ್ಚರರ್ಸ್‌ಗಳಾದ ಡಾ.ಅನಿಮೋಲ್, ಡಾ.ಶಬಾನಾ, ಡಾ.ಫೈಕಾ, ಡಾ.ಸಿಂಧು, ಡಾ.ಸುಶ್ಮಿನಿ, ಡಾ.ಅಲ್ಬಾ ಎಂದು ಗುರುತಿಸಲಾಗಿದೆ.
ಸಹಪಾಠಿಗಳ ಮುಂದೆ ಯಶಸ್ವಿನಿ ಮೈಬಣ್ಣ ಹಾಗೂ ಡ್ರೆಸ್ ಬಗ್ಗೆ ಟೀಕೆ ಆರೋಪ ಕೇಳಿಬಂದಿದೆ. ಕಪ್ಪು ಬಣ್ಣದ ನೀನು ಡಾಕ್ಟರ್ ಆಗಬೇಕಾ? ಎಂದು ಅವಮಾನ ಮಾಡಲಾಗಿತ್ತು. ಇದರಿಂದ ಮನನೊಂದು ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಳು ಎಂದು ಆರೋಪಿಸಲಾಗಿತ್ತು. ಕಣ್ಣು ನೋವು ಎಂದು ಒಂದು ದಿನ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಸೆಮಿನಾರ್, ರೆಡಿಯಾಲಜಿ ಕೇಸ್ ನೀಡದೆ ಕೊಂಕು ಮಾತುಗಳಿಂದ ನಿಂದನೆ ಮಾಡಲಾಗಿತ್ತು ಎನ್ನಲಾಗಿದೆ.



