ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಆಕಸ್ಮಿಕ ನಿಧನದ ನಂತರ, ಅವರ ಚಿಕ್ಕಪ್ಪ ಹಾಗೂ ಸಂಸದ ಶರದ್ ಪವಾರ್ ಅವರು ಬಾರಾಮತಿಗೆ ಆಗಮಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಅಜಿತ್ ಪವಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಅವರು ಈ ದುರ್ಘಟನೆಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು. ಅಜಿತ್ ಪವಾರ್ ಅವರ ಸಾವು ಕೇವಲ ಒಂದು ಆಕಸ್ಮಿಕ ಅಪಘಾತವಾಗಿದ್ದು, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಾಗಲಿ, ಷಡ್ಯಂತ್ರವಾಗಲಿ ಇಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದರು. “ಇದು ಮಹಾರಾಷ್ಟ್ರಕ್ಕೆ ತುಂಬಾ ದೊಡ್ಡ ನಷ್ಟ. ಕಠಿಣ ಪರಿಶ್ರಮಿ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಈ ನಷ್ಟವನ್ನು ಭರಿಸುವುದು ಅಸಾಧ್ಯ,” ಎಂದು ಅವರು ದುಃಖ ವ್ಯಕ್ತಪಡಿಸಿದರು.
ಅಜಿತ್ ಪವಾರ್ ಅವರ ಸಾವಿನ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, “ಇಂದಿಗೂ ಕೆಲ ವಿಷಯಗಳು ನಮ್ಮ ಕೈಯಲ್ಲಿಲ್ಲ. ದಯವಿಟ್ಟು ಈ ದುಃಖದ ಸಂದರ್ಭದಲ್ಲೂ ರಾಜಕೀಯ ತರಬೇಡಿ. ಇದು ಕೇವಲ ಅಪಘಾತ,” ಎಂದು ಮನವಿ ಮಾಡಿದರು.
ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್ ಸೇರಿದಂತೆ ಹಲವು ರಾಜಕೀಯ ನಾಯಕರು ಈ ಘಟನೆಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಿದ ಹಿನ್ನೆಲೆಯಲ್ಲೇ ಶರದ್ ಪವಾರ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.



