ಶಿವಮೊಗ್ಗ: ವಿಕಲಚೇತನರ ಪಿಂಚಣಿ ಮಂಜೂರು ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಉಪ ತಹಶೀಲ್ದಾರ್‌ಗೆ ನ್ಯಾಯಾಲಯ 4 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಿಹಾಳ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಷ್ಪಲತಾ ಶಿಕ್ಷೆಗೆ ಗುರಿಯಾದ ಅಧಿಕಾರಿಯಾಗಿದ್ದಾರೆ.
ಡಿ.ಬಿ.ಹಳ್ಳಿ ನಿವಾಸಿ ಗಿರೀಶ್ ಅವರು ತಮ್ಮ ಮೂಕ ಹಾಗೂ ವಿಕಲಚೇತನ ತಂದೆಗೆ ಅಂಗವಿಕಲರ ಪಿಂಚಣಿ ಮಂಜೂರು ಮಾಡಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸಿದ್ದರು. ಪಿಂಚಣಿ ಮಂಜೂರು ಮಾಡಿಕೊಡಲು ಉಪ ತಹಶೀಲ್ದಾರ್ ಪುಷ್ಪಲತಾ ಅವರು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು.
ಲಂಚದ ಬೇಡಿಕೆ ಹಿನ್ನೆಲೆಯಲ್ಲಿ ಗಿರೀಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, 2017ರ ಸೆಪ್ಟೆಂಬರ್ 21ರಂದು ₹5 ಸಾವಿರ ಮುಂಗಡ ಲಂಚ ಸ್ವೀಕರಿಸುತ್ತಿದ್ದ ವೇಳೆ ಪುಷ್ಪಲತಾ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖಾಧಿಕಾರಿ ಹೆಚ್.ಎಸ್. ತಿಪ್ಪೇಸ್ವಾಮಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಲಭ್ಯವಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉಪ ತಹಶೀಲ್ದಾರ್ ಪುಷ್ಪಲತಾ ಅವರಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಸುಂದರ್ ರಾಜ್ ವಾದ ಮಂಡಿಸಿದ್ದರು. ವಿಕಲಚೇತನರ ಪಿಂಚಣಿ ಮಂಜೂರು ಮಾಡಲು ಲಂಚ ಪಡೆದ ಪ್ರಕರಣದಲ್ಲಿ ಹಲವು ವರ್ಷಗಳ ಬಳಿಕ ನ್ಯಾಯಾಲಯ ಶಿಕ್ಷೆ ವಿಧಿಸಿರುವುದು ಗಮನಾರ್ಹವಾಗಿದೆ.

