ನವದೆಹಲಿ: ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವಿರುದ್ಧ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
2023ರ ಸೆಪ್ಟೆಂಬರ್‌ನಲ್ಲಿ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು `ಡೆಂಗ್ಯೂ ಮತ್ತು ಮಲೇರಿಯಾ’ಗೆ ಹೋಲಿಸಿ ಅದರ ನಿರ್ಮೂಲನೆಗೆ ಕರೆ ನೀಡುವ ಮೂಲಕ ಚರ್ಚೆಗೆ ಕಾರಣವಾಗಿದ್ದರು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಉದಯನಿಧಿ ಸ್ಟಾಲಿನ್, ಯಾವುದೇ ಧರ್ಮವನ್ನು ಗುರಿಯಾಗಿಸುವ ಬದಲು ಜಾತಿ ಆಧಾರಿತ ತಾರತಮ್ಯ ಮತ್ತು ಸಾಮಾಜಿಕ ಅನ್ಯಾಯಗಳನ್ನು ಟೀಕಿಸುತ್ತಿದ್ದೇನೆ ಎಂದು ವಾದಿಸಿದ್ದರು.
ಬಳಿಕ ವಿವಿಧ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಬಹು ಎಫ್‌ಐಆರ್‌ಗಳನ್ನು ಕ್ರೋಢೀಕರಿಸುವಂತೆ ಕೋರಿ ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಆದೇಶ ಹೊರಡಿಸಿದೆ. ಉದಯನಿಧಿ ಸ್ಟಾಲಿನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ಹಲವಾರು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಎಫ್‌ಐಆರ್‌ಗಳ ಜೊತೆಗೆ ಬಿಹಾರದಲ್ಲಿ ಹೊಸ ದೂರು ದಾಖಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ನ್ಯಾಯಾಲಯವು ದೃಢವಾಗಿ ಪ್ರತಿಕ್ರಿಯಿಸಿ, ನೀವು ಹೊಸ ದೂರುಗಳನ್ನು ಸಲ್ಲಿಸುತ್ತಲೇ ಇರಲು ಸಾಧ್ಯವಿಲ್ಲ ಎಂದು ಹೇಳಿತು.