ನಟ ನಾಗಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ವಿಚ್ಛೇದನಕ್ಕೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಕಾರಣ ಎಂದು ವಿವಾದಕ್ಕೆ ಹೇಳಿಕೆ ನೀಡಿದ್ದ ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಅವರಿಗೆ ಹೈದರಾಬಾದ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಸುರೇಖಾ ವಿರುದ್ಧ ನಟ ನಾಗಾರ್ಜುನ ಅವರು ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಡಿಸೆಂಬರ್ 12 ರಂದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಹೈದರಾಬಾದ್ ನ್ಯಾಯಾಲಯವು ಸಮನ್ಸ್ ನೀಡಿದೆ.
ಅಬಕಾರಿ ಪ್ರಕರಣಗಳ ವಿಶೇಷ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (ಜೆಎಫ್‌ಸಿಎಂ) ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 356 (ಮಾನನಷ್ಟ) ಅಡಿಯಲ್ಲಿ ಸುರೇಖಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಅರಣ್ಯ ಸಚಿವೆ ಸುರೇಖಾ ಅವರು ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ ಬಳಿಕ ರಾಜಕೀಯ ನಾಯಕರು ಮತ್ತು ತೆಲುಗು ಚಿತ್ರರಂಗದಿಂದ ತೀವ್ರ ವಿರೋಧ ಎದುರಿಸಿದ್ದರು. ಸುರೇಖಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೇ ನಟ ನಾಗಾರ್ಜುನ ಅವರು ಸಚಿವೆಯ ವಿರುದ್ಧ ಆಕ್ರೋಶ ಹೊರಹಾಕಿದ್ದರಲ್ಲದೇ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ತೆಲುಗು ಚಿತ್ರರಂಗದ ಗಣ್ಯರು ಸಚಿವೆ ವಿರುದ್ಧ ಕೆಂಡಕಾರಿದ್ದಾರಲ್ಲದೇ ಅವರನ್ನು ಸಂಪುಟದಿಂದ ತೆಗೆದುಹಾಕಬೇಕು ಎಂದು ಸಿಎಂ ರೇವಂತ್ ರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ.