ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ನದಾಫ್/ಪಿಂಜಾರ ಸಮುದಾಯದ ಸುಮಾರು 25 ಲಕ್ಷ ಜನಸಂಖ್ಯೆ ಇದ್ದು, ಹತ್ತಿಯಿಂದ ಹಾಸಿಗೆ, ದಿಂಬು, ಹಗ್ಗ, ಕಣ್ಣಿ ಇತ್ಯಾದಿ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುವುದು ಜೀವನೋಪಾಯದ ದಾರಿಯಾಗಿದೆ. ನಮ್ಮ ಸಮಾಜದವರು ಅರೆ ಅಲೆಮಾರಿಗಳಾಗಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಅಲ್ಪಸಂಖ್ಯಾತರಾಗಿದ್ದರೂ ಕೂಡ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದೇವೆ ಎಂದು ರಾಜ್ಯ ನದಾಫ್/ಪಿಂಜಾರ್ ಸಮುದಾಯದ ರಾಜ್ಯ ಕಾರ್ಯದರ್ಶಿ ಎಂ.ಎಂ. ಗಾಡಗೋಳಿ ಬೇಸರ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸಮಾಜ ಅತ್ಯಂತ ಹಿಂದುಳಿದ ಸಮಾಜವೆಂದು ಸರ್ಕಾರ ಗುರುತಿಸಿ, 1993ರಲ್ಲಿ ವೃತ್ತಿ ಆಧಾರದ ಮೇಲೆ ಪ್ರವರ್ಗ-1ರಲ್ಲಿ ಮೀಸಲಾತಿಯನ್ನು ನೀಡಿದೆ. ನಮ್ಮ ಜನಾಂಗದವರು ಪ್ರವರ್ಗ-1ರಲ್ಲಿ ಇತರೆ 117 ಜಾತಿಯವರೊಂದಿಗೆ ಸ್ಥರೆ ಮಾಡಿ ಶೇ.4ರ ಒಟ್ಟು ಮೀಸಲಾತಿಯಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ನದಾಫ್/ಪಿಂಜಾರ ಜನಾಂಗದವರು ಇದುವರೆಗೆ ಲೋಕಸೇವಾ ಆಯೋಗದ ನೇರ ನೇಮಕಾತಿಯಲ್ಲಿ ಕೆಎಎಸ್ ಹುದ್ದೆಗೆ ಆಯ್ಕೆಯಾಗಿಲ್ಲ. ಕೇಂದ್ರದ ಐಎಎಸ್/ ಐಪಿಎಸ್‌ಗೂ ಸಹ ಆಯ್ಕೆಯಾಗಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ರಾಜ್ಯದ ಎಲ್ಲಾ ಜನತೆಗೆ `ಸಮ ಪಾಲು ಸಮ ಬಾಳು’ ಎಂದು ವಾಕ್ಯ ಘೋಷಣೆ ಮಾಡಿದ ಈ ಸರ್ಕಾರ ಅಲ್ಪಸಂಖ್ಯಾತರಲ್ಲಿ ಅತ್ಯಂತ ಹಿಂದುಳಿದ ನಮ್ಮ ನದಾಫ್/ಪಿಂಜಾರ ಸಮುದಾಯದವರಿಗೆ ನ್ಯಾಯ ದೊರಕಿಸುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು.
ಈ ವೇಳೆ ಕೆ.ಎಫ್ ಹಳ್ಯಾಳ, ಎಚ್.ಆರ್ ನದಾಫ್, ಶರೀಫಸಾಬ್ ನೂರಬಾಷಾ, ರಬ್ಬಾನಿ ಹುಲಕೋಟಿ, ಫಕ್ರುಸಾಬ್ ನದಾಫ್, ದಾವಲಸಾಬ್ ನದಾಫ್, ಶೌಕತ್ ಅಣ್ಣಿಗೇರಿ, ಎಂ.ಬಿ ನದಾಫ್, ರಂಜಾನಸಾಬ್ ನದಾಫ್ ಉಪಸ್ಥಿತರಿದ್ದರು.
ಕಳೆದ ಎರಡು ವರ್ಷಗಳಿಂದ ಸಂಬಂಧಪಟ್ಟ ಸಚಿವರಿಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. 2024ರಲ್ಲಿ ಹಾಗೂ 18-02-2025ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಹಭಾಗಿಯಾಗಿ ವಿಷಯವನ್ನು ಪ್ರಸ್ತಾಪಿಸಲಾಗಿತ್ತು ಹಾಗೂ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಎಂ.ಎಂ. ಗಾಡಗೋಳಿ ಅಸಮಾಧಾನ ವ್ಯಕ್ತಪಡಿಸಿದರು.