ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಪವಿತ್ರಗೌಡಗೆ ಮನೆ ಊಟ ನೀಡದಂತೆ ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ.
ವಿಚಾರಣಾಧೀನ ಕೈದಿಗಳಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ, ಮುಂದಿನ ದಿನಗಳಲ್ಲಿ ಇತರೆ ಆರೋಪಿಗಳೂ ಇದೇ ಬೇಡಿಕೆ ಇಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೈಲಿನೊಳಗೆ ಮನೆ ಊಟ ನೀಡಬೇಕಾದರೆ ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ ಒಳಗೆ ಕಳುಹಿಸಬೇಕಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಮತ್ತು ತಂಡ ಅಗತ್ಯವಾಗುತ್ತದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಕೈದಿಗಳಿದ್ದು, ಎಲ್ಲರೂ ಇದೇ ಆದೇಶದ ಆಧಾರದ ಮೇಲೆ ಅರ್ಜಿ ಸಲ್ಲಿಸಿದರೆ ನಿರ್ವಹಣೆ ಕಷ್ಟಕರವಾಗಲಿದೆ ಎಂದು ಕಾರಾಗೃಹ ಇಲಾಖೆ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲು ಕಾರಾಗೃಹ ಇಲಾಖೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದೆ. ಇದಕ್ಕೂ ಮೊದಲು ಜೈಲಿನ ಆಹಾರ ಗುಣಮಟ್ಟ ಸರಿಯಿಲ್ಲ, ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಪವಿತ್ರಗೌಡ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಗೆ ನಾಗರಾಜು ಹಾಗೂ ಲಕ್ಷ್ಮಣ್ ಕೂಡ ಸೇರಿಕೊಂಡಿದ್ದರು. ಮನವಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಮೂವರು ಆರೋಪಿಗಳಿಗೆ ದಿನಕ್ಕೆ ಒಮ್ಮೆ ಮನೆ ಊಟ ನೀಡಲು ಅನುಮತಿ ನೀಡಿತ್ತು.



