ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂಗಳ ಹೊಸ ವರ್ಷದ ಯುಗಾದಿ ಹಬ್ಬ ಹಾಗೂ ಮುಸ್ಲಿಮರ ದೊಡ್ಡ ಹಬ್ಬ ರಂಜಾನ್ ಜೊತೆಗೆ ಹನುಮ ಜಯಂತಿ, ಅನೇಕ ಕಡೆ ಜಾತ್ರೆ, ಮದುವೆಗಳೂ ಏಕ ಕಾಲಕ್ಕೆ ಬಂದಿರುವುದರಿಂದ ಕಳೆದ 3-4 ದಿನಗಳಿಂದ ಪಟ್ಟಣದಲ್ಲಿ ಖರೀದಿ ಭರಾಟೆ ಜೋರಾಗಿಯೇ ಸಾಗಿದೆ. ಶನಿವಾರ ಯುಗಾದಿ ಅಮವಾಸ್ಯೆ, ಭಾನುವಾರ ಯುಗಾದಿ ಪಾಡ್ಯ ಮತ್ತು ರಂಜಾನ್ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿದೆ.
ನೆತ್ತಿ ಸುಡುವ ಬಿಸಿಲು, ಜೇಬು ಸುಡುವಂತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಯುಗಾದಿ-ರಂಜಾನ್ ಹಬ್ಬದ ಖರೀದಿ ಅಬ್ಬರಕ್ಕೇನೂ ಕಡಿಮೆ ಇಲ್ಲವೆಂಬಂತಹ ವಾತಾವರಣ ಕಂಡು ಬರುತ್ತಿದೆ. ಹಿಂದೂ ಮತ್ತು ಮುಸ್ಲಿಂ ಬಾಂಧವರು ಅಗತ್ಯ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದಾರೆ. ಬಹುತೇಕ ಪರೀಕ್ಷೆಗಳು ಮುಗಿದಿದ್ದು, ಪಾಲಕರೊಂದಿಗೆ ಮಕ್ಕಳೂ ಮಾರುಕಟ್ಟೆಗೆ ಬಂದಿದ್ದರಿಂದ ಅಗತ್ಯ ವಸ್ತುಗಳ ಖರೀದಿ ಜತೆಗೆ ಹೋಟೆಲ್, ತಂಪು ಪಾನೀಯಗಳ ಅಂಗಡಿಗಳು ಭರ್ತಿಯಾಗಿವೆ.
ಹಬ್ಬಕ್ಕೆ ಹೊಸ ವಸ್ತಾçಭರಣ, ವಾಹನ, ದಿನಸಿ, ಹೂವು-ಹಣ್ಣು, ತರಕಾರಿ ಸೇರಿ ಅವರವರ ಆರ್ಥಿಕ ಶಕ್ತಿ ಸಾಮರ್ಥ್ಯ ಮತ್ತು ಅಗತ್ಯತೆಗನುಗುಣವಾದ ವಸ್ತುಗಳ ಖರೀದಿಗಾಗಿ ಪಟ್ಟಣಕ್ಕೆ ಜನ ಹರಿದು ಬರುತ್ತಿದ್ದು, ಜನ ಸಂದಣಿಯಿಂದ ಮಾರುಕಟ್ಟೆ ಪ್ರದೇಶ ಕಿಕ್ಕಿರಿದು ತುಂಬಿತ್ತು. ಮುಖ್ಯ ಬಜಾರ ರಸ್ತೆಯ ಎರಡೂ ಕಡೆ ಬೀದಿ-ಬದಿ ವ್ಯಾಪಾರಸ್ಥರ ತಳ್ಳುವ ಗಾಡಿಗಳು, ಬೈಕ್, ಅಟೋ, ಗೂಡ್ಸ್ ವಾಹನಗಳಿಂದ ಟ್ರಾಫಿಕ್ ಕಿರಿಕಿರಿಯಿಂದ ಜನತೆ ಪರದಾಡುವಂತಾಗಿತ್ತು. ವಿಶೇಷವಾಗಿ ಮುಸ್ಲಿಂ ಸಮುದಾಯದವರು ರಂಜಾನ್ ತಿಂಗಳು ಪೂರ್ತಿ ಪ್ರಾರ್ಥನೆ ಹಾಗೂ ಉಪವಾಸದ ನಂತರ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ರಂಜಾನ್ ಹಬ್ಬದ ವಿಶೇಷ ಊಟಕ್ಕೆ ಬೇಕಾಗುವ ಸುರಕುಂಬಾ ಇತರೆ ಸಿಹಿ ಪದಾರ್ಥಕ್ಕೆ ಬೇಕಾದ ಶಾವಿಗೆ, ಒಣ ಹಣ್ಣುಗಳು ಮಾರಾಟಕ್ಕೆ ಬಂದಿವೆ. ಶಾವಿಗೆ, ಬೆಲ್ಲ, ಸಕ್ಕರೆ, ದ್ರಾಕ್ಷಿ, ಗೋಡಂಬಿ, ಸಕ್ಕರೆ, ಬಾಸುಮತಿ ಅಕ್ಕಿ ಸೇರಿದಂತೆ ಮಸಾಲೆ ಪದಾರ್ಥ ಸೇರಿ ಹಬ್ಬಕ್ಕೆ ಬೇಕಾದ ವಿವಿಧ ವಸ್ತುಗಳ ಖರೀದಿ ಜೋರಾಗಿದೆ.
ದೊಡ್ಡ ಅಂಗಡಿಗಳ ಹೊರತಾಗಿ ಬೀದಿ ಬದಿಯಲ್ಲಿನ ತಳ್ಳು ಗಾಡಿಗಳಲ್ಲಿ ಬಟ್ಟೆ, ಬಳೆ, ಚಪ್ಪಲಿ, ಸೀರೆ, ಕುರ್ತಾ, ಸುಗಂಧ ದ್ರವ್ಯಗಳು, ಮಹಿಳೆಯರ ಶೃಂಗಾರದ ವಸ್ತುಗಳು, ತಾಜ್ (ಟೊಪ್ಪಿಗೆ), ಮಕ್ಕಳ ಬಟ್ಟೆಗಳು ಹೀಗೆ ಹಬ್ಬಕ್ಕೆ ಬೇಕಿರುವ ಎಲ್ಲ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು. ಮುಖ್ಯವಾಗಿ ಯುಗಾದಿ ಪಾಡ್ಯ ರೈತರ ಪಾಲಿನ ಹೊಸ ವರ್ಷವೇ ಸರಿ. ಹೊಸ ಹುಮ್ಮಸ್ಸಿನೊಂದಿಗೆ ಭೂತಾಯಿಗೆ ಪೂಜೆ ಸಲ್ಲಿಸಿ ಮಾಗಿ ಉಳುಮೆ ಪ್ರಾರಂಭಿಸುವ ರೈತರು ಎತ್ತುಗಳು, ಹೊಸ ಟ್ರ್ಯಾಕ್ಟರ್, ಕೃಷಿ ಸಾಮಗ್ರಿಗಳನ್ನು ಖರೀದಿಸುವ ಸಡಗರದಲ್ಲಿದ್ದಾರೆ.
ಪರೀಕ್ಷೆಗಳು ಮುಗಿದಿದ್ದರಿಂದ ಹಬ್ಬದ ವ್ಯಾಪಾರಕ್ಕೆ ಪಾಲಕರು ಮಕ್ಕಳನ್ನೂ ಕರೆತರುತ್ತಿದ್ದಾರೆ. ಬಿಸಿಲ ಪ್ರಮಾಣ ಹೆಚ್ಚಿರುವುದರಿಂದ ಬಾಯಾರಿಕೆ-ದಾಹ ತಣಿಸಿಕೊಳ್ಳಲು ಚಹಾ-ಟಿಫನ್ ವ್ಯಾಪಾರಕ್ಕಿಂತ ಕೋಲ್ಡ್ ವಾಟರ್, ಕೋಲ್ಡ್ಡ್ರಿಂಕ್ಸ್, ಐಸ್‌ಕ್ರೀಮ್ ವ್ಯಾಪಾರ ಜೋರಾಗಿದೆ. ದೊಡ್ಡ ಅಂಗಡಿಗಳಿಗಿAತಲೂ ರಸ್ತೆ ಬದಿಯ ಸಣ್ಣ ವ್ಯಾಪಾರಾವೇ ಜೋರಾಗಿದೆ.
– ಮಂಜು ಠಾಠೋಡ.
ವ್ಯಾಪಾರಸ್ಥರು.