ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಂತ್ರಾಲಯ ಪಾದಯಾತ್ರಾ ಸಂಘದ ವತಿಯಿಂದ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ 67ನೇ ವರ್ಷದ ಪಾದಯಾತ್ರೆಯು ಯಾತ್ರೆಯ ರೂವಾರಿ ದಿ. ವೈದ್ಯ ಬಾಬುರಾವ್ ಕುಲಕರ್ಣಿ ಅವರ ನಿವಾಸದಿಂದ ರವಿವಾರ ಸಂಜೆ ಪ್ರಾರಂಭವಾಯಿತು.
ಪಾದಯಾತ್ರೆಯು ಅ. 16ರಂದು ಶ್ರೀಕ್ಷೇತ್ರ ಮಂತ್ರಾಲಯವನ್ನು ತಲುಪಲಿದೆ. ಪಾದಯಾತ್ರೆ ಆರಂಭಕ್ಕೂ ಮುನ್ನ ದಿ. ವೈದ್ಯ ಬಾಬುರಾವ್ ಕುಲಕರ್ಣಿ ಅವರ ನಿವಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಪಾದಯಾತ್ರೆಯ ಯಶಸ್ವಿಗಾಗಿ ಪ್ರಾಣೇಶಾಚಾರ್ಯ ಅವಧಾನಿ ಅವರ ನೇತೃತ್ವದಲ್ಲಿ ವಿಶೇಷ ಹೋಮವನ್ನು ನೆರವೇರಿಸಲಾಯಿತು. ಪಾದಯಾತ್ರೆಯಲ್ಲಿ ನಿತ್ಯ ಈ ಹೋಮ-ಹವನ, ಹರಿನಾಮಸ್ಮರಣೆ ನಡೆಸಲಾಗುವುದರಿಂದ ಸಮಸ್ತ ಮಾನವ ಕುಲಕ್ಕೆ ಒಳ್ಳೆಯದಾಗಬೇಕೆಂಬ ಸಂಕಲ್ಪವನ್ನು ಹೊಂದಿದ್ದೇವೆ ಎಂದು ಅವಧಾನಿಗಳು ನುಡಿದರು.
ಪಾದಯಾತ್ರೆಯು ಸೋಮೇಶ್ವರನ ದರ್ಶನ ಪಡೆದು ಪಾಟೀಲ ಕುಲಕರ್ಣಿ ಅವರ ನಿವಾಸದಲ್ಲಿ ಸಭೆಯಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯ ಕೃಷ್ಣ ಕುಲಕರ್ಣಿ ಮಾತನಾಡಿ, ಧಾರ್ಮಿಕ ಕ್ಷೇತ್ರದ ಪಾದಯಾತ್ರೆ ಮನಸ್ಸಿನಲ್ಲಿರುವ ದುರ್ಗುಣಗಳನ್ನು ನಾಶ ಮಾಡಿ ಸದ್ಗುಣಗಳ ಪ್ರಾಪ್ತಿಗೆ ಮುಕ್ತಿ ಮಾರ್ಗ ತೋರುವುದಾಗಿದೆ. ದಿ. ವೈದ್ಯ ಬಾಬುರಾವ್ ಕುಲಕರ್ಣಿಯವರ ಸಾತ್ವಿಕ ಶಕ್ತಿ ಈ ಪಾದಯಾತ್ರೆಯ ಯಶಸ್ವಿಗೆ ಕಾರಣವಾಗಿದೆ. ಪಾದಯಾತ್ರಾ ಸಂಘದ ಕಾರ್ಯಾಧ್ಯಕ್ಷರಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ದಿ. ಶ್ರೀನಿವಾಸ ಕುಲಕರ್ಣಿ (ತಂಗೋಡ) ಅವರ ಅಗಲಿಕೆಯು ಸಹ ಪಾದಯಾತ್ರೆಗೆ ತುಂಬಲಾರದ ನಷ್ಟವಾಗಿದ್ದು, ಇವರಿಬ್ಬರ ದಿವ್ಯಾತ್ಮ ನಮ್ಮ ಪಾದಯಾತ್ರೆಗೆ ದಾರಿದೀಪವಾಗಿರಲಿದೆ ಎಂದರು.
ಪಾದಯಾತ್ರೆಯು ಅ. 16ರಂದು ಸಂಜೆ ಮಂತ್ರಾಲಯ ತಲುಪಲಿದ್ದು, ಪಾದಯಾತ್ರೆಯಲ್ಲಿ ಧಾರ್ಮಿಕ ಚಿಂತನೆಗಳು, ನಿತ್ಯ ಪೂಜೆ, ಪಾರಾಯಣ, ಉಪನ್ಯಾಸಗಳು ನೆರವೇರಲಿವೆ. ಇಂತಹ ದೀರ್ಘಾವಧಿಯ ಈ ಭಾಗದಲ್ಲಿಯೇ ಮೊದಲನೆಯದು ಎನ್ನಬಹುದಾದ ಪಾದಯಾತ್ರಾ ಸಂಘದ 67ನೇ ವರ್ಷದ ಪಾದಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಪಲ್ಲಣ್ಣ ಕುಲಕರ್ಣಿ, ಡಾ. ಶ್ರೀಹರಿ ಕುಲಕರ್ಣಿ, ಡಾ. ಬಿ.ಬಿ. ಜೋಶಿ, ಆರ್.ಎ. ಕುಲಕರ್ಣಿ, ಗೋಪಾಲ ಪಡ್ನೀಸ್, ಅನಿಲ ಕುಲಕರ್ಣಿ, ಗುರುರಾಜ ಪಾಟೀಲ ಕುಲಕರ್ಣಿ, ಲಕ್ಷ್ಮಿಕಾಂತ ಗಣಾಚಾರ, ವೆಂಕಟೇಶ ಗುಡಿ, ರಾಜಾಚಾರ್ಯ ರಾಯಚೂರ, ಅಶೋಕ ಪೂಜಾರ, ಗುರುರಾಜ ಕುಲಕರ್ಣಿ, ಕೆ.ಎಸ್. ಕುಲಕರ್ಣಿ, ನಾರಾಯಣ ಪಾಟೀಲಕುಲಕರ್ಣಿ, ದಿಗಂಬರ ಪೂಜಾರ, ಗುರಪ್ಪ ಶಿರೋಳ, ಮುಂತಾದವರಿದ್ದರು.



