ರಾಯಚೂರು: ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮಾ ನಾಯಕ್ ಅವರು ಸಂಚರಿಸುತ್ತಿದ್ದ ಕಾರು ಲಿಂಗಸುಗೂರು ತಾಲೂಕಿನ ಗೊಲಪಳ್ಳಿ ಗ್ರಾಮದ ಬಳಿ ಅಪಘಾತಕ್ಕೊಳಗಾಗಿದೆ.
ಮುಂದೆ ಸಾಗುತ್ತಿದ್ದ ಕಾರಿಗೆ ಶಾಸಕಿ ಇದ್ದ ಕಾರು ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಶಾಸಕಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ ನಂತರ ಅವರು ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿಯ ಪ್ರಕಾರ, ಹುಬ್ಬಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ, ಮುಂದೆ ಸಾಗುತ್ತಿದ್ದ ಕಾರಿಗೆ ನಾಯಿ ಅಡ್ಡ ಬಂದು ಚಾಲಕ ವಾಹನ ನಿಯಂತ್ರಣ ತಪ್ಪಿಸಿದ್ದಾನೆ. ಪರಿಣಾಮವಾಗಿ ಕಾರು ರಸ್ತೆ ಪಕ್ಕದ ಗುಡ್ಡಕ್ಕೆ ಡಿಕ್ಕಿಯಾಗಿದ್ದಲ್ಲದೆ, ಹಿಂದಿನಿಂದ ಬಂದ ಶಾಸಕಿಯ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ.
ಅಪಘಾತಕ್ಕೊಳಗಾದ ಎರಡೂ ಕಾರುಗಳು ಕರೆಮ್ಮಾ ನಾಯಕ್ ಅವರಿಗೆ ಸೇರಿದವುಗಳಾಗಿದ್ದು, ಈ ಘಟನೆ ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.