ನವದೆಹಲಿ: ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡರು, ಹುಣಸೆ, ಹಲಸು ಮತ್ತು ನೇರಳೆ ಮೊದಲಾದ ಪೌಷ್ಟಿಕಾಂಶಯುಕ್ತ ಹಾಗೂ ಔಷಧೀಯ ಗುಣಗಳಿರುವ ಹಣ್ಣು ಬೆಳೆಗಳ ಅಭಿವೃದ್ಧಿಗಾಗಿ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ಸ್ಥಾಪಿಸುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ.
ಸಂಸತ್ ಭವನದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೃಷಿ ಸಚಿವರನ್ನು ಭೇಟಿ ಮಾಡಿದ ವೇಳೆ ಈ ಪ್ರಸ್ತಾವನೆಯನ್ನು ಅವರಿಗೆ ಹಸ್ತಾಂತರಿಸಿದರು. ಶತಮಾನಗಳಿಂದ ಭಾರತದಲ್ಲಿ ಬೆಳೆಯಲಾಗುತ್ತಿರುವ ಈ ಹಣ್ಣುಗಳು ಸಾವಯವವಾಗಿ, ಕಡಿಮೆ ಮಳೆಯಲ್ಲೇ ಹಾಗೂ ಕಡಿಮೆ ವೆಚ್ಚದಲ್ಲಿ ಬೆಳೆಯುವ ಶಕ್ತಿಯುಳ್ಳವುಗಳಾಗಿವೆ ಎಂದು ದೇವೇಗೌಡರು ವಿವರಿಸಿದರು.
ದೇಶದಲ್ಲಿ ವಿಶೇಷವಾಗಿ ಮಧ್ಯ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಹುಣಸೆ ವ್ಯಾಪಕವಾಗಿ ಬೆಳೆಯಲಾಗುತ್ತಿದ್ದು, ಹಲಸು ಮತ್ತು ನೇರಳೆಗಳು ದಕ್ಷಿಣ ಸೇರಿದಂತೆ ಮಧ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಹೆಚ್ಚು ಕಂಡುಬರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಕಸಿ ಮಾಡಿದ ಸಸಿಗಳ ಬಳಕೆಯಿಂದ ಇಳುವರಿ ಹಾಗೂ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದರೂ, ಕೊಯ್ಲು ತೊಂದರೆ, ಮಾರುಕಟ್ಟೆ ಹಾಗೂ ಸಂಸ್ಕರಣಾ ಸೌಲಭ್ಯಗಳ ಕೊರತೆ, ಶೀತಲೀಕರಣ ಕೇಂದ್ರಗಳಿಗೆ ಸೀಮಿತ ಪ್ರವೇಶದ ಕಾರಣದಿಂದ ಸಾಕಷ್ಟು ಉತ್ಪಾದನೆ ವ್ಯರ್ಥವಾಗುತ್ತಿದೆ ಎಂದು ಅವರು ಸೂಚಿಸಿದರು.
ದೇಶೀಯ ಹಾಗೂ ರಫ್ತು ಮಾರುಕಟ್ಟೆಗಳಲ್ಲಿ ಈ ಹಣ್ಣುಗಳು ಮತ್ತು ಅವುಗಳ ಉಪ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ, ಇವು ‘ಡಾಲರ್ ಗಳಿಸುವ’ ಬೆಳೆಗಳಾಗುವ ಸಾಮರ್ಥ್ಯ ಹೊಂದಿದ್ದು, ರಾಷ್ಟ್ರೀಯ ಆರ್ಥಿಕತೆಗೆ ಕೊಡುಗೆ ನೀಡುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದೆಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.



