ವಿಜಯಸಾಕ್ಷಿ ಸುದ್ದಿ, ಗದಗ: 2025-26ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಅಂಗವಾಗಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ಕೃಷಿ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಗದಗ ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಕೃಷಿ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮಂಗಳವಾರ ಗದಗ ತಾಲೂಕಿನ ವೆಂಕಟಾಪೂರ, ಎಕ್ಲಾಸಪೂರ, ಮುಂಡರಗಿ ತಾಲೂಕಿನ ಹಲ್ಲಿಕೇರಿ, ಹಲ್ಲಿಗುಡಿ, ಜಾಲವಾಡಗಿ, ಮುಂಡರಗಿ ರೈತ ಸಂಪರ್ಕ ಕೇಂದ್ರ ಹಾಗೂ ಕಕ್ಕೂರು ಗ್ರಾಮಗಳಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಆಯೋಜಿಸಲಾಗಿತ್ತು. ಐ.ಸಿ.ಎ.ಆರ್-ರಾಷ್ಟ್ರೀಯ ಪಶು ಪೋಷಣೆ ಹಾಗೂ ಶರೀರಕ್ರಿಯಾ ವಿಜ್ಞಾನ ಸಂಸ್ಥೆ ಬೆಂಗಳೂರು ಹಾಗೂ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳು, ಆತ್ಮ ಸಿಬ್ಬಂದಿ, ಕೃಷಿ ಸಖಿಯರು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರುಗಳು, ಪಶು ಸಖಿಯರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ರೈತ ಮುಖಂಡರು ಪಾಲ್ಗೊಂಡಿದ್ದರು.
ಈ ಅಭಿಯಾನದಲ್ಲಿ ವಿವಿಧ ತಂತ್ರಜ್ಞಾನಗಳಾದ ಬೀಜೋಪಚಾರ, ಸುಧಾರಿತ ತಳಿಗಳು, ತೋಟಗಾರಿಕೆ ಬೆಳೆಗಳು, ಸಿರಿಧಾನ್ಯ ಹಾಗೂ ಅವುಗಳ ಮಹತ್ವ, ಕೃಷಿ ಯಂತ್ರೋಪಕರಣಗಳು, ಸಮಗ್ರ ಕೃಷಿ ಪದ್ಧತಿಗಳ ತರಬೇತಿ ನೀಡಲಾಯಿತು. ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಮುಂಗಾರು ಹಂಗಾಮಿನ ಅಡಿ ಅಭಿವೃದ್ಧಿ ಪಡಿಸಿದ ಮುಂಗಾರು ಬೆಳೆಗಳಾದ ಹೆಸರು, ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ, ಈರುಳ್ಳಿ ಬೆಳೆಗಳ ಕುರಿತ ಕೃಷಿ ಕೈಪಿಡಿಯನ್ನು ರೈತರಿಗೆ ನೀಡಲಾಯಿತು. ಜೊತೆಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ಹಸ್ತಪ್ರತಿಗಳನ್ನು ವಿತರಿಸಲಾಯಿತು.