HomeGadag Newsಉನ್ನತಿ ಗ್ರಾಮೀಣ ಜನರ ಆಶಾಕಿರಣ: ಸಿ.ಆರ್. ಮುಂಡರಗಿ

ಉನ್ನತಿ ಗ್ರಾಮೀಣ ಜನರ ಆಶಾಕಿರಣ: ಸಿ.ಆರ್. ಮುಂಡರಗಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಜನರ ಕೌಶಲ್ಯ ಗುರುತಿಸಿ, ಜೀವನೋಪಾಯಕ್ಕೆ ಅಗತ್ಯವಾದ ತರಬೇತಿ ನೀಡಲು ಉನ್ನತಿ ಯೋಜನೆ ಮಹತ್ತರ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.

ತಾಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಎಸ್‌ಬಿಐ- ಎಎಸ್‌ಎಫ್-ಆರ್ ಸೆಟಿ ಹುಲಕೋಟಿ ಇವುಗಳ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ 60 ದಿನಗಳಿಗೂ ಹೆಚ್ಚು ಅಕುಶಲ ದಿನಗಳನ್ನು ಪೂರೈಸಿದವರಿಗಾಗಿ ಹಮ್ಮಿಕೊಂಡ 30 ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಮಾತನಾಡಿ, ಉನ್ನತಿ ಯೋಜನೆಯು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾರ್ಮಿಕರ ಕೌಶಲ್ಯದ ನೆಲೆಯನ್ನು ನವೀಕರಿಸಿ, ಅವರ ಜೀವನೋಪಾಯ ಸುಧಾರಿಸುವ ಮಹತ್ತರ ಕಾರ್ಯ ಈ ತರಬೇತಿಯ ಆಶಯವಾಗಿದೆ ಎಂದರು.

ಲೀಡ್ ಬ್ಯಾಂಕ್ ಜಿಲ್ಲಾ ಮ್ಯಾನೇಜರ್ ಸಂತೋಷ ಎಂ.ವಿ ಮಾತನಾಡಿ, ಅಂಕ ಪಟ್ಟಿಯನ್ನು ನೋಡಿ ಉದ್ಯೋಗ ನೀಡುವ ಕಾಲ ಇದಲ್ಲ. ಇಂದಿನ ಆಧುನಿಕ ಕಾಲದಲ್ಲಿ ಯಾವುದೇ ಕೆಲಸ ಸಣ್ಣದು ಸಹ ಅಲ್ಲ. ಮಾಡುವ ಕೆಲಸದಲ್ಲಿ ನೈಪುಣ್ಯತೆ ಇದ್ದು, ಅದರಲ್ಲಿ ಉತ್ತಮ ಕೌಶಲ್ಯವಂತರಾಗಿದ್ದರೆ ಕೆಲಸ ನೀಡಲು ಅನೇಕ ಸಂಘ-ಸಂಸ್ಥೆಗಳು ಮುಂದೆ ಬರುತ್ತವೆ. ಕೌಶಲ್ಯ ಉಳ್ಳವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಬ್ಯಾಂಕ್‌ಗಳು ಸನ್ನದ್ಧವಾಗಿವೆ. ದೇಶದ ಪ್ರಗತಿಗೆ ಕೌಶಲ್ಯ ಹೊಂದಿದ ಯುವ ಜನರ ಅಗತ್ಯವಿದೆ. ಸರ್ಕಾರದ ಹಲವು ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕೌಶಲ್ಯ ಪಡೆದು ಉತ್ತಮ ಸಾಧನೆ ಮಾಡಿದ ಹಲವು ಜನರು ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿ, ನೂರಾರು ಜನರಿಗೆ ಉದ್ಯೋಗ ನೀಡಿ ನೌಕರರ ಆರ್ಥಿಕ ಸ್ಥಿತಿ ವೃದ್ಧಿಸಿದ್ದಾರೆ ಎಂದು ತಿಳಿಸಿದರು.

ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ಕಿರಣ ಕುಮಾರ ಎಸ್.ಎಚ್ ಮತ್ತು ಎನ್‌ಆರ್‌ಎಲ್‌ಎಂ ಕಾರ್ಯಕ್ರಮ ವ್ಯವಸ್ಥಾಪಕ ರಘುನಾಥಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಬಸನಗೌಡ್ರ, ಅನಿಲಕುಮಾರ ಕೆ, ಸಹನಾ ಕೋಟೆಕಲ್ಲ, ಮಲ್ಲಮ್ಮ ರಡ್ಡೆರ, ರೇಣುಕಾ ಪಲ್ಲೆದ, ನೀಲಾ ಸಂಗನಾಳ ಇತರರಿದ್ದರು. ಹುಲಕೋಟಿ ಆರ್-ಸೆಟಿ ತರಬೇತುದಾರ ನವೀನ ಹಿರೇಗೌಡ್ರ ನಿರೂಪಿಸಿ, ವಂದಿಸಿದರು.

ಜೀವನದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಉಚಿತ ಊಟ, ವಸತಿ ಹಾಗೂ ಸಹಾಯಧನ ನೀಡುವ ಮೂಲಕ ಕೌಶಲ್ಯ ಮತ್ತು ಜ್ಞಾನ ಹೆಚ್ಚಿಸಲು ಉನ್ನತಿ ತರಬೇತಿ ಕಾರ್ಯಕ್ರಮ ರೂಪಿಸಿರುವುದು ಗ್ರಾಮೀಣ ಜನರಿಗೆ ಆಶಾಕಿರಣವಾಗಿದೆ ಎಂದು ಸಿ.ಆರ್. ಮುಂಡರಗಿ ಅಭಿಪ್ರಾಯಪಟ್ಟರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!