ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ದೇಶ ಅಭಿವೃದ್ಧಿಯಾಗುವುದು ಗುಡಿ ಗುಂಡಾರಗಳ ನಿರ್ಮಾಣದಿಂದಲ್ಲ. ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಅಭಿವೃದ್ಧಿ ಸಾಧ್ಯವೆಂದು ನಿವೃತ್ತ ಪ್ರಾಧ್ಯಾಪಕ ಎಸ್.ಶಿವಾನಂದ ಹೇಳಿದರು.
ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪ್ರತಿಭಾ ದಿನಾಚರಣೆ ಹಾಗೂ ವಿವಿಧ ಸಾಂಸ್ಕೃತಿಕ ಸಂಘಗಳ ಸಮಾರೋಪ ಸಮಾರಂಭದ ಉಧ್ಘಾಟನೆ ನೆರವೇರಿಸಿ ಮಾತನಾಡಿದರು.
ಯುವಕರು ದೇಶದ ಸಾಮರ್ಥ್ಯವನ್ನು ನಿಭಾಯಿಸುವ ಶಕ್ತಿಯನ್ನು ಹೊಂದಿದವರಾಗಿದ್ದಾರೆ. ಜೀವನವೇ ಒಂದು ಸಂಭ್ರಮಾಚರಣೆ. ಅದನ್ನು ಸಂತೋಷದಿಂದ ಅನುಭವಿಸಬೇಕು. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾಗಲು ಉತ್ತಮವಾಗಿ ಆಲಿಸುವ ಸಮರ್ಥ್ಯವನ್ನು ಹೊಂದಿರಬೇಕು. ಹಾಗಾದಲ್ಲಿ ಮಾತ್ರ ವಿಕಸನ ವಿಂಗಡನೆಯಾಗಲು ಸಾಧ್ಯವೆಂದರು.
ನಿಜವಾದ ಧರ್ಮವೆಂದರೆ ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುವುದಲ್ಲ. ಬದಲಿಗೆ ಎಲ್ಲಾ ಜೀವ ಸಂಕುಲಗಳ ಮೇಲೆ ದಯೆ, ಕರುಣೆ ಹೊಂದಿರುವುದಾಗಿದೆ. ಪ್ರತಿ ವಸ್ತುವಿಗೆ ಅದರದೇ ಆದ ಮಹತ್ವ ಮತ್ತು ಸ್ವಭಾವಗಳಿದ್ದು, ಅದನ್ನು ನಾವು ಗೌರವಿಸಬೇಕು ಎಂದರು.
ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷ ಕೆ. ಕೊಟ್ರೇಶಪ್ಪ ಹಾಗೂ ಮಾಜಿ ಅಧ್ಯಕ್ಷ ಕೋರಿ ವಿರೂಪಾಕ್ಷಪ್ಪ ಮಾತನಾಡಿದರು. ಪ್ರಾಚಾರ್ಯ ಎಸ್.ಎಂ. ಸಿದ್ದಲಿಂಗಮೂರ್ತಿ, ಎಸ್‌ಎಸ್‌ಎಚ್ ಜೈನ್ ಕಾಲೇಜು ಪ್ರಾಚಾರ್ಯ ಕೆ.ಎಂ. ವಿಶ್ವನಾಥ, ಪ್ರಮುಖರಾದ ಆರುಂಡಿ ನಾಗರಾಜ, ಪುಷ್ಪಾ ದಿವಾಕರ್, ವಿದ್ಯಾರ್ಥಿ ಪ್ರತಿನಿಧಿಗಳಾದ ಲೂಬ್ನಾ ಅಕ್ತರ್, ಹೆಚ್.ವಿ. ಕೃತಿಕಾ, ಪ್ರಮೋದ ಎಸ್ ಹಾಗೂ ಇತರರಿದ್ದರು.