ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳಲ್ಲಿ ಎಲ್ಲ ವರ್ಗದ ಮಕ್ಕಳು ಅಧ್ಯಯನ ಮಾಡುತ್ತಿರುವುದರಿಂದ ಜೀವನದ ಪರಿಪೂರ್ಣ ಪಾಠವನ್ನು ವಿದ್ಯಾರ್ಥಿಗಳು ಇಲ್ಲಿ ಅರಿತುಕೊಳ್ಳುತ್ತಾರೆ. ಜೊತೆಗೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸರ್ಕಾರಿ ಶಾಲೆಯಿಂದ ಮಾತ್ರ ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ (ಅಭಿವೃದ್ಧಿ) ಮಂಗಳಾ ತಾಪಸ್ಕರ್ ಅಭಿಪ್ರಾಯಪಟ್ಟರು.
ಅವರು ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಉಪನಿರ್ದೇಶಕಿಯಾಗಿ ಬಡ್ತಿ ಹೊಂದಿದ ನಿಮಿತ್ತ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕಳೆದ ದಶಕದಿಂದ ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಖಾಸಗಿ ಶಾಲೆಗಳನ್ನು ಮೀರಿ ಹಲವಾರು ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶವನ್ನು ನೀಡುವ ಮೂಲಕ ಅಭಿವೃದ್ಧಿಯನ್ನು ಹೊಂದಿವೆ. ಆ ನಿಟ್ಟಿನಲ್ಲಿ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದುವ ಮೂಲಕ ಒಂದು ಮಾದರಿ ಶಾಲೆಯಾಗಿ ಬೆಳೆದು ನಿಂತಿದೆ ಎಂದರು.
ಈ ಸಂದರ್ಭದಲ್ಲಿ ಶಂಕ್ರಮ್ಮ ಆರ್.ಹಣಮಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಎಂ.ಐ. ಶಿವನಗೌಡ್ರು. ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್ ಮುಂತಾದವರು ಉಪಸ್ಥಿತರಿದ್ದರು. ಸಂಜೀವಿನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮೀ ಅಣ್ಣಿಗೇರಿ ಮಂಗಳಾ ತಾಪಸ್ಕರ್ ಅವರ ಶಿಕ್ಷಣಪರ ಕಾಳಜಿ ಶಿಕ್ಷಕರ ಬಗ್ಗೆ, ಮಕ್ಕಳ ಬಗ್ಗೆ, ಅವರಲ್ಲಿರುವ ವಿಶೇಷ ಪ್ರೀತಿ, ಮಮತೆಯ ಕುರಿತು ಮಾತನಾಡಿ, ಅವರ ಅಧಿಕಾರಾವಧಿಯಲ್ಲಿ ಗದಗ ಜಿಲ್ಲೆ ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಹೊಂದಲಿ ಎಂದರು.


