ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರೆಂದು ಬಿಜೆಪಿ ಅಂತಿಮಗೊಳಿಸಿದೆ. ವಿಧಾನಸಭೆ ಚುನಾವಣೆಯಲ್ಲಿ 288ರಲ್ಲಿ 132 ಸ್ಥಾನಗಳನ್ನು ಪಡೆದು ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇದೀಗ ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಆಯ್ಕೆ ಆಗಿದ್ದಾರೆ. ದೇವೇಂದ್ರ ಫಡ್ನವೀಸ್ ಅವರು ಸಂಪೂರ್ಣ ಸ್ಥಾನಮಾನ ಮತ್ತು ಪ್ರಭಾವದೊಂದಿಗೆ ಮಹಾರಾಷ್ಟ್ರ ರಾಜಕೀಯಕ್ಕೆ ಮರಳಿದ್ದಾರೆ.
ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ದೇವೇಂದ್ರ ಫಡ್ನವೀಸ್ ಉಪಸ್ಥಿತರಿದ್ದರು. ಬಿಜೆಪಿ ತನ್ನ ಮಹಾರಾಷ್ಟ್ರ ಶಾಸಕಾಂಗ ಪಕ್ಷದ ಸಭೆಗೆ ನಿರ್ಮಲಾ ಸೀತಾರಾಮನ್ ಮತ್ತು ವಿಜಯ್ ರೂಪಾನಿ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ನೇಮಿಸಿತ್ತು.
ಶಾಸಕಾಂಗ ಪಕ್ಷದ ಸಭೆಗೆ ಮುನ್ನ ಬಿಜೆಪಿ ನಾಯಕ ಸುಧೀರ್ ಮುಂಗಂಟಿವಾರ್, ಮಹಾಯುತಿ ಮೈತ್ರಕೂಟ ನಾಯಕರು ಬುಧವಾರ ಮಧ್ಯಾಹ್ನ 3:30 ಕ್ಕೆ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ ಎಂದು ಹೇಳಿದ್ದರು.