ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಅಂತರAಗ-ಬಹಿರAಗ ಶುದ್ಧಗೊಳಿಸುವ ಶಕ್ತಿ ಗುರುವಿಗಿದೆ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಬಾಳಿದರೆ ಬಾಳು ಬಂಧನಕಾರಿ. ಧರ್ಮ ಪರಿಪಾಲನೆಯಿಂದ ಮನುಷ್ಯ ವಿಮುಖನಾದರೆ ಜೀವನದಲ್ಲಿ ಅವನತಿ ತಪ್ಪಿದ್ದಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ತೆಗ್ಗಿನಮಠ ಸಂಸ್ಥಾನದಲ್ಲಿ ಲಿಂ.ಚAದ್ರಮೌಳೀಶ್ವರ ಶ್ರೀಗಳ ೧೦ನೇ ವರುಷದ ಪುಣ್ಯ ಸ್ಮರಣೋತ್ಸವ ಹಾಗೂ ಇಂದಿನ ವರಸದ್ಯೋಜಾತ ಶ್ರೀಗಳ ಪಟ್ಟಾಧಿಕಾರ ೯ನೇ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಉರಿಯುವ ಜ್ಯೋತಿ ತನಗಾಗಿ ಉರಿಯುವುದಿಲ್ಲ. ಜಗಕೆ ಬೆಳಕು ನೀಡಲು ತನ್ನನ್ನು ತಾನು ಸುಟ್ಟುಕೊಳ್ಳುವಂತೆ ಶ್ರೀ ಗುರು ಸಹ ಭಕ್ತರ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಾನೆ. ವರ್ತಮಾನ ಭವಿಷ್ಯತ್ತುಗಳಿಗೆ ಇತಿಹಾಸದ ಅರಿವು ಇರಬೇಕೆಂಬುದು ಲಿಂ.ಚAದ್ರಮೌಳೀಶ್ವರ ಶ್ರೀಗಳವರ ಆಶಯವಾಗಿತ್ತು. ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸಂಸ್ಕಾರ, ಸಂಸ್ಕೃತಿಯ ಅರಿವನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆಯೆಂದರಿತು ಭಕ್ತರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸತ್ಕಾçಂತಿಯನ್ನು ಮಾಡಿ ಜ್ಞಾನ ಸಂವರ್ಧನೆಗಾಗಿ ಸದಾ ಶ್ರಮಿಸಿದ್ದನ್ನು ಮರೆಯಲಾಗದೆಂದ ಅವರು, ಲಿಂ.ಚAದ್ರಮೌಳೀಶ್ವರ ಶ್ರೀಗಳು ಬದುಕಿರುವಾಗಲೇ ಗೌರವ ಡಾಕ್ಟರೇಟ್ ಪ್ರಾಪ್ತವಾಗಬೇಕಾಗಿತ್ತು. ಈಗ ಮರಣೋತ್ತರವಾಗಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೊಟ್ಟಿರುವುದು ತಮಗೆ ಸಮಾಧಾನ ತಂದಿದೆ ಎಂದರು.
ಸಮಾರAಭ ಉದ್ಘಾಟಿಸಿ ಉಪದೇಶಾಮೃತ ನೀಡಿದ ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶುದ್ಧವಾದ ಬುದ್ಧಿ ಸಂಪತ್ತಿನ ಆಗರವೆಂದು ಭಾವಿಸಿದ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮಿಗಳು ಬೆಂಗಾಡಾದ ಹರಪನಹಳ್ಳಿಯ ಶೈಕ್ಷಣಿಕ ವಲಯದಲ್ಲಿ ಅದ್ಭುತ ಸಾಧನೆಗೈದರು. ಹಣ ಮತ್ತು ಅಧಿಕಾರದ ಬಗೆಗೆ ಚಿಂತಿಸುವ ಮನುಷ್ಯ ತನ್ನ ದೇಶ, ಧರ್ಮ, ಸಂಸ್ಕೃತಿಯ ಬಗೆಗೂ ಹೆಚ್ಚಿನ ಅಭಿಮಾನ-ಶೃದ್ಧೆ ಇರಬೇಕೆಂಬುದು ಅವರ ಆಶಯವಾಗಿತ್ತು ಎಂದರು.
ಕೂಡ್ಲಿಗಿ ಪ್ರಶಾಂತ ಸಾಗರ ಶಿವಾಚಾರ್ಯರು ಉಪಸ್ಥಿತರಿದ್ದರು. ಟಿ.ಎಂ.ಎ.ಇ.ಸAಸ್ಥೆ ಕಾರ್ಯದರ್ಶಿ ಡಾ. ಟಿ.ಎಂ. ಚಂದ್ರಶೇಖರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಲಿಂ. ಚಂದ್ರಮೌಳೀಶ್ವರ ಶ್ರೀಗಳವರ ನಿರಂತರ ಪರಿಶ್ರಮ ಮತ್ತು ಸಾಧನೆ ಇಂದಿನ ಬೆಳಕಿಗೆ ಮೂಲವೆಂದು ಸ್ಮರಿಸಿದರು.
ಸಮಾರಂಭದಲ್ಲಿ ಡಾ. ಪಿ.ಕೆ.ಎಂ.ಪ್ರಶಾಂತ್, ಸಾಲಿ ಬಸವರಾಜ, ಪಿ.ವಿಜಯ್‌ಕುಮಾರ್, ಟಿ.ಎಂ. ಪ್ರತೀಕ್, ಹೆಚ್.ಎಂ. ಲಲಿತಮ್ಮ, ಬಣಕಾರ್ ನಾಗರತ್ನಮ್ಮ, ಹರಾಳ್ ಅಶೋಕ್, ಟಿ.ಎಂ. ವಿಶ್ವನಾಥ, ಟಿ.ಎಂ. ಶಿವಶಂಕರ್, ಕುಲಸಚಿವ ಕೆ.ಎಸ್. ರುದ್ರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಾ. ಕೆ.ಮಧು, ಹೆಚ್.ಎಂ. ಕೊಟ್ರಯ್ಯ, ಕೆ.ಕುಮಾರ್, ಪರಮೇಶ್ವರಗೌಡ್ರು, ಎಂ.ಚAದ್ರಣ್ಣ, ಪೂಜಾರ ಬಸವರಾಜಪ್ಪ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಸಿ.ಎಂ. ಕೊಟ್ರಯ್ಯ ಸ್ವಾಗತಿಸಿದರು. ಎಸ್.ದ್ವಾರಕೀಶರೆಡ್ಡಿ ನಿರೂಪಣೆ ಮಾಡಿದರು. ತೆಗ್ಗಿನಮಠ ಸಂಸ್ಥಾನದ ಕಲಾ ಬಳಗದಿಂದ ಸಂಗೀತ ಸೇವೆ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಬೆಳಿಗ್ಗೆ ರಾಮಘಟ್ಟ ಪುರವರ್ಗಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳಿಂದ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರಗಳು ಜರುಗಿದವು. ಕಾರ್ಯಕ್ರಮದ ನಂತರ ಅನ್ನ ದಾಸೋಹ ಜರುಗಿತು.
ನೇತೃತ್ವ ವಹಿಸಿದ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜ್ಞಾನ ಕ್ರಿಯಾತ್ಮಕವಾದ ಧರ್ಮದ ಪರಿಪಾಲನೆಯಿಂದ ಶಾಂತಿ ನೆಲೆಸಲು ಸಾಧ್ಯ. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಜೀವನದಲ್ಲಿ ಅವನತಿ ನಿಶ್ಚಿತ. ಹಣ ಕಳೆದುಕೊಂಡು ಬದುಕಬಹುದು. ಆದರೆ ಗುಣ ಕಳೆದುಕೊಂಡು ಬಾಳಲಾಗದೆಂಬ ನಿಲುವನ್ನು ಚಂದ್ರಮೌಳೀಶ್ವರ ಶ್ರೀಗಳು ಹೊಂದಿದ್ದರು. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ವಿಕಾಸಗೊಳ್ಳದಿರುವುದೇ ಇಂದಿನ ಆವಾಂತರಗಳಿಗೆ ಕಾರಣವೆಂದರೆ ತಪ್ಪಾಗದು. ಲಿಂ. ಚಂದ್ರಮೌಳೀಶ್ವರ ಶ್ರೀಗಳವರು ಹಾಕಿದ ಧರ್ಮ ದಾರಿ ಮತ್ತು ಶ್ರೀ ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ಶ್ರೀ ಮಠ ಹಾಗೂ ಸಮಾಜದ ಶ್ರೇಯೋಭಿವೃದ್ಧಿ ಮಾಡುವುದೇ ನಮ್ಮ ಧ್ಯೇಯವಾಗಿದೆ ಎಂದರು.