ಇತ್ತೀಚಿನ ದಿನಗಳಲ್ಲಿ ಸಿನಿಮಾ ನೋಡುವ ಮೊದಲು ಬುಕ್‌ಮೈ ಶೋ ರೇಟಿಂಗ್ ನೋಡೋದೇ ಹಲವರ ಅಭ್ಯಾಸ. ಆದರೆ ಡೆವಿಲ್ ಸಿನಿಮಾ ವಿಚಾರದಲ್ಲಿ ಆ ಅಭ್ಯಾಸವೇ ಅಸಾಧ್ಯವಾಗಿದೆ. ಕಾರಣ, ಡೆವಿಲ್ ಚಿತ್ರಕ್ಕೆ ಬುಕ್‌ಮೈ ಶೋನಲ್ಲಿ ರೇಟಿಂಗ್ ಹಾಗೂ ವಿಮರ್ಶೆ ಆಯ್ಕೆಯನ್ನು ಸಂಪೂರ್ಣವಾಗಿ ಆಫ್ ಮಾಡಲಾಗಿದೆ.
ಸಿನಿಮಾ ನೋಡಿದವರು ಮಾತ್ರ ರೇಟಿಂಗ್ ನೀಡಬೇಕು ಎಂಬ ಉದ್ದೇಶ ಇದ್ದರೂ, ಹಣ ನೀಡಿ ನೆಗೆಟಿವ್ ವಿಮರ್ಶೆ ಬರೆಯಿಸುವ ಪ್ರವೃತ್ತಿ ಹೆಚ್ಚಾಗಿದೆ ಎಂದು ನಿರ್ದೇಶಕ ದಿನಕರ್ ತೂಗುದೀಪ ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಕೋರ್ಟ್ ಆದೇಶದ ಮೇರೆಗೆ ಬುಕ್‌ಮೈ ಶೋನಲ್ಲಿ ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ದುಡ್ಡು ಕೊಟ್ಟು ಸಿನಿಮಾ ಕೆಡಿಸುವ ಕೆಲಸ ಆಗುತ್ತಿದೆ. ನನ್ನ ರಾಯಲ್ ಸಿನಿಮಾಗೂ ಇದೇ ಅನುಭವ ಆಗಿತ್ತು. ಬೇಕೆಂದು ನೆಗೆಟಿವ್ ರೇಟಿಂಗ್ ಮಾಡಿಸಿದ್ದರು. ಅದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ದಿನಕರ್ ಹೇಳಿದ್ದಾರೆ.
ಒಟ್ಟಾರೆ, ಡೆವಿಲ್ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದರೂ, ರೇಟಿಂಗ್ ಇಲ್ಲದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರೇಕ್ಷಕರು ಸಿನಿಮಾ ನೋಡಬೇಕಾದರೆ ಈಗ ರೇಟಿಂಗ್‌ಗಿಂತ ತಮ್ಮದೇ ಅನುಭವಕ್ಕೆ ನಂಬಿಕೆ ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.



