ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಸಂಕಷ್ಟಗಳು ಒಂದರ ಮೇಲೆ ಒಂದರಂತೆ ಎದುರಾಗುತ್ತಿವೆ. ಕೊಲೆ ಪ್ರಕರಣ ಹೊರತಾಗಿ, ದರ್ಶನ್ ಮನೆಯಲ್ಲಿದ್ದ 82 ಲಕ್ಷ ರೂ. ನಗದು ಕುರಿತಂತೆ ಆದಾಯ ತೆರಿಗೆ ಇಲಾಖೆ ನಡೆಸಿದ ತನಿಖೆ ಮತ್ತಷ್ಟು ಗಂಭೀರಗೊಂಡಿದೆ.
ಕೊಲೆ ಪ್ರಕರಣ ನಡೆದ ವೇಳೆ ದರ್ಶನ್ ಮನೆಗೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು 82 ಲಕ್ಷ ರೂ. ನಗದು ಪತ್ತೆ ಹಚ್ಚಿ ಸೀಜ್ ಮಾಡಿದ್ದರು. ಈ ಹಣದ ಮೂಲ ಏನು? ಯಾರು ಕೊಟ್ಟರು? ಹೇಗೆ ಬಂದಿತು? ಎಂಬ ಪ್ರಶ್ನೆಗಳ ಉತ್ತರ ಹುಡುಕಲು ಅಧಿಕಾರಿಗಳು ಬಳ್ಳಾರಿ ಜೈಲಿಗೂ ತೆರಳಿ ಮಾಹಿತಿಯನ್ನು ಸಂಗ್ರಹಿಸಿದ್ದರು.
ಇದೇ ಹಿನ್ನೆಲೆ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲೇ ದರ್ಶನ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಹಣದ ಮೂಲ ಕುರಿತು ಸ್ಪಷ್ಟನೆ ಕೇಳಿದ್ದಾರೆ. ಇದೀಗ ದರ್ಶನ್, “ನಾನು ಕೃಷಿ ಮಾಡುತ್ತಿದ್ದೆ, ಪಶುಗಳ ಮಾರಾಟ ಮಾಡುತ್ತಿದ್ದೆ. ಜೊತೆಗೆ ನನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳು ಕೊಟ್ಟ ಹಣವೂ ಇದೆ. ಈ ಎಲ್ಲ ಮೂಲಗಳಿಂದಲೇ 82 ಲಕ್ಷ ರೂ. ಸಂಗ್ರಹವಾಗಿದೆ” ಎಂದು ಹೇಳಿಕೆ ನೀಡಿರುವ ಮಾಹಿತಿ ಹೊರಬಿದ್ದಿದೆ.
82 ಲಕ್ಷ ನಗದು ಸಿಕ್ಕಿರುವುದು ತನಿಖೆಗೆ ಹೊಸ ತಿರುವು ನೀಡಿರುವಂತಾಗಿದ್ದು, ಐಟಿ ಅಧಿಕಾರಿಗಳಿಂದ ಇನ್ನೂ ಹೆಚ್ಚಿನ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ.



